
ನವದೆಹಲಿ: ಸಂಘರ್ಷ ಪೀಡಿತ ಮಣಿಪುರ (Manipur) ರಾಜ್ಯವನ್ನು ಸಹಜ ಸ್ಥಿತಿಗೆ ತರಲು ಮಧ್ಯಸ್ಥಿಕೆ ವಹಿಸುವಂತೆ ವಿಪಕ್ಷಗಳ ಬಣ INDIA ಒಕ್ಕೂಟದ ನಾಯಕರು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಎರಡು ದಿನಗಳ ಕಾಲ ಮಣಿಪುರಕ್ಕೆ ಭೇಟಿ ನೀಡಿದ ವಿರೋಧ ಪಕ್ಷಗಳ ಸಂಸದರ 21 ಸದಸ್ಯರ ನಿಯೋಗ ಸೇರಿದಂತೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ ಒಟ್ಟು 31 ಸದಸ್ಯರು ಇಂದು ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.
ಮಣಿಪುರದ ಪರಿಸ್ಥಿತಿಯು ಕಳೆದ ಕೆಲವು ವಾರಗಳಲ್ಲಿ ನಿರ್ಣಾಯಕ ಹಂತವನ್ನು ತಲುಪಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಆನ್ಲೈನ್ನಲ್ಲಿ ಕಾಣಿಸಿಕೊಂಡ ಆಘಾತಕಾರಿ ವೈರಲ್ ವೀಡಿಯೋ ರಾಷ್ಟ್ರವನ್ನು ಆಘಾತಕ್ಕೆ ತಳ್ಳಿದೆ. ರಾಜ್ಯ ಆಡಳಿತ ಮತ್ತು ಪೊಲೀಸರು ಈ ವಿಷಯವನ್ನು ತ್ವರಿತವಾಗಿ ಪರಿಹರಿಸಲು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆರೋಪಿಯನ್ನು ವಿಚಾರಣೆಗೊಳಪಡಿಸಿ ಬಂಧಿಸಲು ಎರಡು ತಿಂಗಳ ಕಾಲ ವಿಳಂಬ ಮಾಡಿರುವುದು ಸಮಸ್ಯೆಯ ತೀವ್ರತೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ

ವಿಪಕ್ಷಗಳ ಒಕ್ಕೂಟದ ಸಂಸದರ ನಿಯೋಗವು ಮಣಿಪುರಕ್ಕೆ ಎರಡು ದಿನಗಳ ಭೇಟಿ ಕೈಗೊಂಡಿದ್ದರು. ಬಿಷ್ಣುಪುರ ಜಿಲ್ಲೆಯ ಇಂಫಾಲ್, ಮೊಯಿರಾಂಗ್, ಚುರಾಚಂದ್ಪುರ ಸೇರಿ ಹಲವಾರು ಶಿಬಿರಗಳಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಜನಾಂಗೀಯ ಘರ್ಷಣೆಯಿಂದ ಸ್ಥಳಾಂತರಗೊಂಡ ಸ್ಥಳೀಯರ ಜೊತೆ ಸಂವಾದ ಕೂಡ ನಡೆಸಿದ್ದರು.