
ಉಡುಪಿ: ಉಡುಪಿಯ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜೊತೆ ಮಾತುಕತೆ ನಡೆಸಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಯಾವುದೇ ಒಂದು ನಿರ್ದಿಷ್ಟ ಕೋಮುವಿನ ಮಹಿಳೆಯ ರಕ್ಷಣೆ ನಾವು ಬಂದಿಲ್ಲ ದಯವಿಟ್ಟು ಈ ಪ್ರಕರಣಕ್ಕೆ ಯಾವುದೇ ಕೋಮು ಬಣ್ಣ ಬಳಿಯಬೇಡಿ ಎಂದು ಮನವಿ ಮಾಡಿದ್ದಾರೆ.

ಸುಮಾರು ಒಂದುವರೆ ಗಂಟೆಗಳ ಕಾಲ ಎಸ್ ಪಿ ಹಾಗೂ ಡಿಸಿ ಜೊತೆ ಮಾತುಕತೆ ನಡೆಸಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಈ ಪ್ರಕರಣ ಇಷ್ಟೊಂದು ವೈರಲ್ ಆಗಲು ಕಾರಣವೇನು ಅನ್ನೋದರ ಬಗ್ಗೆ ಗಮನ ಹರಿಸಬೇಕು. ಅನೇಕ ಸಂಗತಿಗಳ ತನಿಖೆ ಆಗಬೇಕಾಗಿದೆ ಪೂರಕ ಸಾಕ್ಷಿಗಳ ಸಂಗ್ರಹ ಮಾಡಬೇಕಾಗಿದೆ. ನಾಳೆ ನಾನು ಕಾಲೇಜಿಗೆ ಭೇಟಿಯಾಗಿ ಆಡಳಿತ ಮಂಡಳಿಯ ಜೊತೆ ಮಾತನಾಡಬೇಕಿದೆ. ಆ ಬಳಿಕ ಘಟನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದರು.

ಈ ಘಟನೆಯನ ಇಟ್ಟುಕೊಂಡು ಅನೇಕ ಫೇಕ್ ವಿಡಿಯೋಗಳು ಹರಿದಾಡುತ್ತಿದ್ದು, ಹರಿದಾಡುತ್ತಿರುವ ವಿಡಿಯೋಗಳು ಯಾವುದು ಸತ್ಯವಲ್ಲ. ಇವರಿಗೆ ಯಾವುದೇ ವಿಡಿಯೋ ಸಾಕ್ಷ್ಯ ಲಭ್ಯವಾಗಿಲ್ಲ ಅಲ್ಲದೆ ವಿದ್ಯಾರ್ಥಿನಿಯರ ಮೊಬೈಲ್ ನಲ್ಲಿ ಯಾವುದೇ ವಿಡಿಯೋ ಕಂಡು ಬಂದಿಲ್ಲ. ಸಂಬಂಧಪಟ್ಟ ಮೊಬೈಲ್ ಗಳನ್ನು ಪೊಲೀಸರು ರೆಟ್ರೀವ್ ಮಾಡಿದ್ದಾರೆ. 40 ಗಂಟೆಗಳ ಕಾಲ ರೆಟ್ರಿವ್ ಮಾಡಿದರೂ ಏನು ಪತ್ತೆಯಾಗಿಲ್ಲ ಎಂದರು.

ಪೊಲೀಸರು ಈಗಾಗಲೇ ಮೂರು ಮೊಬೈಲ್ಗಳ ಡಾಟಾ ಸಂಗ್ರಹ ಮಾಡಿದ್ದಾರೆ ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಬೇಕಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಾಕ್ಷ ಲಭ್ಯವಾದರೆ ವಿಡಿಯೋ ಬಗ್ಗೆ ಸ್ಷಷ್ಟತೆ ಸಿಗಬಹುದು. ಸೂಕ್ತ ಸಾಕ್ಷಿ ಸಿಗದೇ ಹೋದರೆ ಚಾರ್ಜ್ ಶೀಟ್ ಮಾಡಲು ಸಾಧ್ಯವಿಲ್ಲ. ಸಾಕ್ಷವಿಲ್ಲದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ.
ಸದ್ಯ ಆ ವಿದ್ಯಾರ್ಥಿನಿಯರನ್ನು ನಾವು ಆರೋಪಿತರು ಎಂದು ಕರೆಯಬಹುದು ಅಷ್ಟೇ. ಈ ಪ್ರಕರಣದಲ್ಲಿ ಭಾಗಿಯಾದ ಮೂರು ವಿದ್ಯಾರ್ಥಿನಿಯರ ಅಮಾನತು ಮಾಡಲಾಗಿದೆ. ಈ ಪ್ರಕರಣಕ್ಕೆ ಟೆರರ್ ಲಿಂಕ್ ಇದೆ ಎಂದು ವಾಟ್ಸಾಪ್ ಸಂದೇಶಗಳು ಹರಿದಾಡುತ್ತಿವೆ. ಪ್ರಕರಣದ ಹಿಂದೆ ಅನೇಕ ಸಂಶಯಾಸ್ಪದ ಸಂಗತಿಗಳನ್ನು ಹರಿಯ ಬಿಡಲಾಗಿದೆ. ಘಟನೆಯ ಹಿಂದೆ ಬಿಗರ್ ಥಿಯರಿ ಅಥವಾ ಬೀಗ್ಗರ್ ಸ್ಟೋರಿ ಇದೆ ಎಂದು ಸದ್ಯ ಭಾವಿಸುವುದು ಬೇಡ. ನಾವೇ ನ್ಯಾಯಾಧೀಶರಾಗಿ ತೀರ್ಪು ಕೊಡುವುದು ಅಗತ್ಯವಿಲ್ಲ.
ಮಹಿಳಾ ಆಯೋಗ ಮತ್ತು ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಎಳೆಯ ಮನಸ್ಸುಗಳು ಒಳಗೊಂಡಿವೆ. ಸರಿಯಾದ ಹಾದಿಯಲ್ಲಿ ಪ್ರಕರಣದ ತನಿಖೆ ಆಗಬೇಕು. ತನಿಖೆಗೆ ಮೊದಲೇ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ. ಮಹಿಳಾ ಆಯೋಗ ಪ್ರತಿಭಟನೆ ಮಾಡಲು ಇರುವ ಸಂಸ್ಥೆಯಲ್ಲ. ಮಹಿಳಾ ಆಯೋಗ ಈ ಪ್ರಕರಣಕ್ಕೆ ಯಾವುದೇ ಕೋಮು ಬಣ್ಣ ಬಳಿಯಲು ಬಂದಿಲ್ಲ ಬದಲಾಗಿ ಮಹಿಳೆಯರ ರಕ್ಷಣೆಗೆ ಇರುವ ಸಂಸ್ಥೆ. ಯಾವುದೇ ರಾಜಕೀಯ ಒತ್ತಡವಿಲ್ಲದೆ ಕೋಮು ಪ್ರಭಾವವಿಲ್ಲದೆ ತನಿಖೆ ನಡೆಸುತ್ತೇವೆ. ಇದುವರೆಗೆ ನಮಗೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಯಾವುದೇ ಫೋಟೋ ಅಥವಾ ವಿಡಿಯೋ ಲಭ್ಯವಿಲ್ಲ. ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಸ್ಪಷ್ಟತೆ ಸಿಗಬೇಕು ಎಂದರು.
ಎಫ್ಐಆರ್ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕಾಲೇಜು ಆಡಳಿತ ಮಂಡಳಿ ನಿನ್ನೆ ಈ ಬಗ್ಗೆ ಪತ್ರಿಕಾಗೋಷ್ಠಿ ಮಾಡಿದೆ. ಯಾವುದೇ ದೂರು ಬಾರದ ಕಾರಣ ಪೊಲೀಸರು ದೂರು ದಾಖಲಿಸಿಲ್ಲ ಅಲ್ಲದೆ ತಾನು ದೂರ ನೀಡಲು ಬಯಸುವುದಿಲ್ಲ ಎಂದು ಸಂತ್ರಸ್ತೆ ಪತ್ರದ ಮೂಲಕ ಹೇಳಿದ್ದಾರೆ. ಕಾಲೇಜು ಆಡಳಿತ ಮಂಡಳಿ ಪತ್ರಿಕಾಗೋಷ್ಠಿಯ ನಂತರ ಪ್ರಕರಣ ದಾಖಲಿಸಿದ್ದಾರೆ. ವಿಡಿಯೋ ಇತ್ತು ಮತ್ತು ಅದನ್ನು ನಾವು ಡಿಲೀಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ
ವಿಡಿಯೋ ಡಿಲೀಟ್ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದ ನಂತರ ಪ್ರಕರಣ ದಾಖಲಿಸಲಾಗಿದೆ. ಯಾವುದೇ ಸುಳಿವು ಇಲ್ಲದೆ ಪೊಲೀಸರು ಪ್ರಕರಣ ದಾಖಲಿಸುವುದು ಹೇಗೆ? ಹಿಂದೆ ನಿಂತು ಪೊಲೀಸರನ್ನು ದೂರುವುದು ಸುಲಭ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಅವರಿಗೆ ಸ್ವಾತಂತ್ರ್ಯ ನೀಡಬೇಕು. ಪ್ರಕರಣದ ತನಿಖೆಯಲ್ಲಿ ವಿಳಂಬವಾದರೆ ಮಹಿಳಾ ಆಯೋಗ ಕ್ರಮ ಕೈಗೊಳ್ಳುತ್ತದೆ. ಸದ್ಯ ನಾವು ಸುಮೋಟೋ ಪ್ರಕರಣ ದಾಖಲಿಸಲು ನಿರ್ಧರಿಸಿಲ್ಲ. ಮಾಹಿತಿ ಸಂಗ್ರಹದ ಬಳಿಕ ನಿರ್ಧಾರ ತಿಳಿಸುತ್ತೇವೆ