
ವಿರೋಧ ಪಕ್ಷಗಳ ಒಕ್ಕೂಟ INDIAವನ್ನು ಪ್ರಧಾನಿ ಮೋದಿ ಅವರು ಭಯೋತ್ಪಾದಕ ಸಂಘಟನೆಗಳೊಂದಿಗೆ ಹೋಲಿಸಿ ಮಾಡಿದ ಟೀಕೆಗೆ ಸಿದ್ದರಾಮಯ್ಯ ಕಿಡಿ ಕಾರಿದ್ದು, ನಿಮ್ಮನ್ನು ಲಲಿತ ಮೋದಿ, ನೀರವ್ ಮೋದಿಗೆ ಹೋಲಿಸಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ”ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ವನ್ನು ಈಸ್ಟ್ ಇಂಡಿಯಾ ಕಂಪೆನಿ ಮತ್ತು ಇಂಡಿಯನ್ ಮುಜಾಹಿದ್ದೀನ್ ಗೆ ಹೋಲಿಸಿರುವ ಸನ್ಮಾನ ಪ್ರಧಾನಿ ನರೇಂದ್ರ ಮೋದಿ ಅವರೇ, ಭಾರತೀಯರ ನೂರಾರು ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿ ದೇಶ ಬಿಟ್ಟು ಓಡಿಹೋಗಿರುವ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರ ಹೆಸರಿನಲ್ಲಿಯೂ ನಿಮ್ಮ ಹೆಸರಿನ ಮೋದಿ ಇದೆಯಲ್ಲಾ? ಅವರನ್ನು ನಿಮ್ಮ ಜೊತೆ ಹೋಲಿಸಬಹುದಾ?” ಎಂದು ಕೇಳಿದ್ದಾರೆ.

ಲಲಿತ್ ಮತ್ತು ನೀರವ್ ಹೆಸರಲ್ಲಿಯೂ ಮೋದಿ ಇದೆಯಲ್ಲಾ ಎಂಬ ಸಾಮಾನ್ಯ ಪ್ರಶ್ನೆ ಕೇಳಿದ ರಾಹುಲ್ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ಎರಡು ವರ್ಷ ಜೈಲು ಶಿಕ್ಷೆ ನೀಡಿ, ಲೋಕಸಭೆಯಿಂದ ಅನರ್ಹಗೊಳಿಸಲಾಯಿತು. ಈಗ ಇಂಡಿಯಾವನ್ನು ಈಸ್ಟ್ ಇಂಡಿಯಾ ಕಂಪೆನಿ ಮತ್ತು ಇಂಡಿಯನ್ ಮುಜಾಹಿದ್ದೀನ್‌ಗೆ ಹೋಲಿಸಿರುವ ನಿಮ್ಮ ಹೋಲಿಕೆಗೆ ರಾಹುಲ್ ಗಾಂಧಿಯವರ ವಿರುದ್ಧದ ಕ್ರಮ ಅನ್ವಯವಾಗುವುದಿಲ್ಲವೇ?” ಎಂದು ಕೇಳಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ”ಪ್ರಧಾನಿ ನರೇಂದ್ರ ಮೋದಿ ಅವರೇ, ಇಂಡಿಯಾ ಎಂಬ ಸುಂದರ, ಸುಮಧುರ ಮತ್ತು ಪವಿತ್ರ ಹೆಸರಿನ ಬಗ್ಗೆ ನಿಮಗೆ ಯಾಕೆ ಇಷ್ಟೊಂದು ದ್ವೇಷ? ಇಂಡಿಯಾ ಹೆಸರಿನ ಬಗ್ಗೆ ಇಷ್ಟೊಂದು ಅಸಹನೆ ಹೊಂದಿರುವ ನೀವು ನಿಮ್ಮದೇ ಸರ್ಕಾರದ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮೊದಲಾದ ಕಾರ್ಯಕ್ರಮಗಳ ಹೆಸರನ್ನೂ ಬದಲಾಯಿಸುವಿರಾ?” ಎಂದು ಪ್ರಶ್ನಿಸಿದ್ದಾರೆ.

ಮೋದಿ ಹೇಳಿದ್ದೇನು?
ಪ್ರತಿಪಕ್ಷಗಳ ಒಕ್ಕೂಟ INDIA ಹೆಸರಿನ ವಿರುದ್ಧ ಟೀಕೆ ಮಾಡಿದ್ದ ಪ್ರಧಾನಿ ಮೋದಿ, ”ಈಸ್ಟ್ ಇಂಡಿಯಾ ಕಂಪನಿ, ಪಿಎಫ್‌ಐ, ಇಂಡಿಯನ್ ಮುಜಾಹಿದ್ದೀನ್‌ನಂತಹ ಸಂಘಟನೆಗಳ ಹೆಸರಿನಲ್ಲೂ ಇಂಡಿಯಾ ಎನ್ನುವ ಪದವಿದೆ. ಭಾರತ ಎಂದು ಹೆಸರಿದ್ದ ಮಾತ್ರಕ್ಕೆ ಅದು ಭಾರತವಾಗುವುದಿಲ್ಲ. ದೇಶದ ಹೆಸರನ್ನು ಬಳಸುವುದರಿಂದ ಜನರನ್ನು ದಾರಿ ತಪ್ಪಿಸಲಾಗುವುದಿಲ್ಲ” ಎಂದು ಹೇಳಿದ್ದರು.