
ದೇಶಾದ್ಯಂತ ಅಲ್ಲೋಲ ಕಲ್ಲೋಲ ಉಂಟು ಮಾಡಿರುವ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ , ಅತ್ಯಾಚಾರ ರೀತಿಯ ನೂರಾರು ಪ್ರಕರಣಗಳು ನಡೆದಿವೆ, ಹಾಗಾಗಿ ಇಂಟರ್ನೆಟ್ ಬಂದ್ ಮಾಡಿದ್ದೇವೆ ಎಂದು ಮಣಿಪುರ ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿ ಇಂಡಿಯಾ ಟುಡೆ ಚಾನೆಲ್ ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿದ ಅವರು, “ಇಲ್ಲಿ ಪ್ರತಿದಿನವೂ ಸಂಘರ್ಷ ನಡೆಯುತ್ತಿದೆ. ತುಂಬಾ ಮಂದಿ ಬಲಿಯಾಗಿದ್ದಾರೆ. ಇದೇ ರೀತಿಯ ಹಲವು ಎಫ್‌ಐಆರ್ ದಾಖಲಾದ ಬಗ್ಗೆ ಸಂದೇಶ ಬರುತ್ತಿದೆ. ಇಂತಹ ನೂರಾರು ಘಟನೆಗಳು ಮಣಿಪುರದಲ್ಲಿ ಎರಡು ತಿಂಗಳಲ್ಲಿ ನಡೆದಿದೆ. ಈ ವಿಡಿಯೋ ನಿನ್ನೆಯಷ್ಟೇ ಹೊರಗೆ ಬಂದಿದೆ. ಇಲ್ಲಿನ ‘ಗ್ರೌಂಡ್ ರಿಯಾಲಿಟಿ’ ನೋಡಿದ ಬಳಿಕ ನೀವು ಮಾತನಾಡಿ. ನಿಮ್ಮ ಆರೋಪಗಳನ್ನೆಲ್ಲ ಕೇಳಲು ನಾವು ತಯಾರಿಲ್ಲ. ಇದೇ ರೀತಿಯ ನೂರಾರು ಪ್ರಕರಣಗಳು ನಡೆದಿವೆ, ಅದಕ್ಕಾಗಿಯೇ ನಾವು ಇಂಟರ್ನೆಟ್ ಸೇವೆಯನ್ನು ಇಲ್ಲಿ ಬಂದ್ ಮಾಡಿದ್ದೇವೆ” ಎಂದಿದ್ದಾರೆ.

ಈ ಹೀನ ಘಟನೆ ಕಳೆದ ಮೇ 4ರಂದು ನಡೆದು ಈ ಬಗ್ಗೆ ಮೇ 18ರಂದು ಎಫ್‌ಐಆರ್ ಆಗಿದೆ. ಓರ್ವ ಮುಖ್ಯಮಂತ್ರಿಯಾಗಿ ನಿಮಗೆ ಮಾಹಿತಿ ಇಲ್ಲವೇ? ಎಂಬ ನಿರೂಪಕಿಯ ಪ್ರಶ್ನೆಗೆ ಕೋಪೋದ್ರಿಕ್ತರಾದ ಸಿಎಂ ಮೇಲಿನ ಹೇಳಿಕೆ ನೀಡಿದ್ದು, ಈ ಘಟನೆಗೆ ಸಂಬಂಧಿಸಿ ಓರ್ವನನ್ನು ಬಂಧಿಸಿದ್ಧೇವೆ. ಯಾರೆಲ್ಲ ಇದ್ದಾರೋ ಅವರನ್ನು ಬಂಧಿಸುತ್ತೇವೆ’ ಎಂದು ಹೇಳುತ್ತಲೇ ಮುಂದಿನ ಪ್ರಶ್ನೆ ಕೇಳಿದಾಗ ಕರೆಯನ್ನು ಕಟ್ ಮಾಡಿದ್ದಾರೆ.

ಈ ರೀತಿಯಾಗಿ ಬಿರೇನ್ ಸಿಂಗ್ ಮಾತನಾಡಿರುವ ವಿಡಿಯೋ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಹಲವರು ಅವರೊಬ್ಬ ಅಸಮರ್ಥ ಮುಖ್ಯಮಂತ್ರಿ ಎಂದು ಕಿಡಿಕಾರಿದ್ದಾರೆ.
ಮಣಿಪುರದಲ್ಲಿ ಕುಕಿ-ಜೋ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಬುಧವಾರ ವಿಡಿಯೋವೊಂದು ವೈರಲ್ ಆಗಿದೆ. ಆ ಘಟನೆಯಲ್ಲಿನ ಸಂತ್ರಸ್ತ ಮಹಿಳೆಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ್ದು, ”ಆ ಗುಂಪಿನೊಂದಿಗೆ ಪೊಲೀಸರೇ ನಮನ್ನು ಬಿಟ್ಟಿದ್ದರು” ಎಂದು ಹೇಳಿದ್ದಾರೆ.

ಆ ವಿಡಿಯೋದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲು ಮಾಡಿ ಗಂಡಸರ ಗುಂಪೊಂದು ಮೆರವಣಿಗೆ ನಡೆಸುತ್ತಿರುವುದನ್ನು ಕಾಣುತ್ತದೆ. ಒಬ್ಬರು 20ರ ಹದಿಹರೆಯದ ಮಹಿಳೆ ಮತ್ತು ಇನ್ನೊಬ್ಬರು 40 ವರ್ಷದ ಮಹಿಳೆಯಾಗಿದ್ದಾರೆ. ಕೆಲವು ಪುರುಷರು ಇಬ್ಬರು ಮಹಿಳೆಯರನ್ನು ಹೊಲದ ಕಡೆಗೆ ಬಲವಂತವಾಗಿ ಎಳೆದೊಯ್ಯುತ್ತಿರುವುದನ್ನು ಕಾಣಬಹುದು. ಈ ಬಗ್ಗೆ ಮೇ 18ರಂದು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ದೂರಿನಲ್ಲಿ, 20ರ ಹದಿಹರೆಯದ ಮಹಿಳೆಯನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.