
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಕೋಮು ಆಧರಿತ ಹತ್ಯೆಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ಸರ್ಕಾರ ರಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಮಾನಾಥ ರೈ ಒತ್ತಾಯಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿರುವ ಹಂತದಲ್ಲಿ ಬಿಜೆಪಿ ಮುಖಂಡರು ಸರ್ಕಾರವನ್ನು ಅಸ್ಥಿರ ಗೊಳಿಸಲು ಅಪಪ್ರಚಾರದ ತಂತ್ರದಲ್ಲಿ ತೊಡಗಿದ್ದಾರೆ. ಬಿಜೆಪಿ ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಪ್ರಯತ್ನದಲ್ಲಿ ತೊಡಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು. ಅವರು ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಈ ಹಿಂದೆ ಜಿಲ್ಲೆಯಲ್ಲಿ ನಡೆದಿರುವ ಧರ್ಮ, ಮತೀಯ ದ್ವೇಷದ ಹತ್ಯೆಯ ಪ್ರಕರಣದಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿಲ್ಲ ಎನ್ನುವುದು ತನಿಖೆ ಬಹಿರಂಗ ಪಡಿಸಿದೆ. ಬದಲಾಗಿ ಬಿಜೆಪಿ ಪಕ್ಷದ ಬೆಂಬಲಿತ ಮತೀಯ ಸಂಘಟನೆ ಗಳ ಸದಸ್ಯರು ಗುರುತಿಸಿಕೊಂಡಿರುವುದು ಬಹಿರಂಗವಾಗಿದೆ. ಹೀಗಿರುವಾಗ ಬಿಜೆಪಿ ರಾಜಾಧ್ಯಕ್ಷರು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಮುಖಂಡರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಾಮರಸ್ಯ ಬಯಸುವ ಪಕ್ಷ. ಯಾವುದೇ ಸಂದರ್ಭದಲ್ಲಿ ಹಿಂಸೆಗೆ ಪ್ರಚೋದನೆ ನೀಡಿಲ್ಲ. ಯಾರು ಪ್ರಚೋದನಕಾರಿ ಭಾಷಣ ಮಾಡಿರುವುದು ?ಯಾವ ಪಕ್ಷ ಧರ್ಮ, ಕೋಮು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ಜಿಲ್ಲೆಯ ಜನತೆಗೆ ತಿಳಿದಿದೆ. ಕಾಂಗ್ರೆಸ್ ಈ ರೀತಿಯ ರಾಜಕೀಯ ಮಾಡಿಲ್ಲ. ಜಿಲ್ಲೆಯ ಜನರಿಗೆ ಅತ್ಯಂತ ಹೆಚ್ಚು ಸರಕಾರಿ ಸೌಲಭ್ಯಗಳನ್ನು ನೀಡಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಜನರೇ ಮುಂದಿದ್ದಾರೆ. ಬಿಜೆಪಿಯ ಈ ರೀತಿಯ ಅಪಪ್ರಚಾರವನ್ನು ಇನ್ನಾದರೂ ನಿಲ್ಲಿಸಲು ಮನವಿ ಮಾಡುವುದಾಗಿ ಹಾಗೂ ಇಂತಹ ತಂತ್ರಗಾರಿಕೆಯ ವಿರುದ್ಧ ಜನ ಜಾಗೃತರಾಗಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ನಡೆದ ವೆಂಕಟೇಶ ಬಾಳಿಗಾ, ಪ್ರವೀಣ್ ನೆಟ್ಟಾರು, ಮಸೂದ್, ಜಲೀಲ್, ಫಾಝಿಲ್, ದೀಪಕ್ ರಾವ್, ಶರತ್ ಮಡಿವಾಳ, ಹರೀಶ್ ಪೂಜಾರಿಯವರ ಹತ್ಯೆಗಳ ಹಿಂದಿರುವ ಶಕ್ತಿ ಯಾರು ಎಂಬುದನ್ನು ಪತ್ತೆ ಮಾಡಲು ಎಸ್ ಐಟಿಯ ಅಗತ್ಯ ಇದೆ. ಈ ಹತ್ಯೆಗಳ ಹಿಂದಿರುವವರಿಗೆ ಶಿಕ್ಷೆ ಆದರೆ ಮಾತ್ರ ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯ ನೆಲೆಸಲಿದೆ. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಲು ಸಮಾನ ಮನಸ್ಕ ಸಂಘಟನೆಗಳು ಹಾಗೂ ಜಾತ್ಯತೀತ ಮನೋಭಾವದ ಪಕ್ಷಗಳ ಮುಖಂಡರು ಸೇರಿ ಸಭೆ ನಡೆಸಿದ್ದೇವೆ. ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ ಈ ಕುರಿತು ಮನವಿ ಸಲ್ಲಿಸಲಿದ್ದೇವೆ’ ಎಂದರು.

ಇಂತಹ ಹತ್ಯೆಗಳ ಆರೋಪಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಇಲ್ಲ. ಆದರೆ, ಬಿಜೆಪಿ ಕಾರ್ಯಕರ್ತರು ಸಾಕಷ್ಟು ಮಂದಿ ಇದ್ದಾರೆ. ಈ ರೀತಿಯ ಹತ್ಯೆ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕಿದೆ. ಹೆಣದ ಮೇಲಿನ ರಾಜಕಾರಣ ಬಿಜೆಪಿಯ ಚಾಳಿ. ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹತ್ಯೆ ರಾಜಕಾರಣವನ್ನು ಮತ್ತೆ ಶುರು ಮಾಡಬಹುದು. ಅದಕ್ಕಾಗಿ ಜನ ಜಾಗರೂಕತೆಯಿಂದ ಇರಬೇಕು’ ಎಂದರು.