
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆಯ (Konaje) ಬಾಳೆಪುಣಿಯಲ್ಲಿ (Balepuni) ಶಾಲೆಯೊಂದರ ಸಮೀಪವೇ ಬಾರ್ ತೆರೆದಿರುವುದಕ್ಕೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆಯ ಬಾಳೆಪುಣಿಯಲ್ಲಿ ಈ ಘಟನೆ ನಡೆದಿದೆ.

ಕೇರಳ-ಕರ್ನಾಟಕ ಗಡಿಯಲ್ಲಿರುವ ಶಾರದಾ ಗಣಪತಿ ವಿದ್ಯಾಲಯದ 15 ಮೀಟರ್ ವ್ಯಾಪ್ತಿಯಲ್ಲಿ ಕೆಲವು ಖಾಸಗಿ ಲಾಬಿದಾರರು ಬಾರ್ ತೆರೆದಿದ್ದಾರೆ. ಬಾಳೆಪುಣಿ ಗ್ರಾಮ ಪಂಚಾಯಿತಿಯಿಂದ ಅಕ್ರಮವಾಗಿ ಅನುಮತಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಶಿಕ್ಷಣ ಸಂಸ್ಥೆಯ 100 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಕಾನೂನು ಇದ್ದರೂ ಬಾರ್ ಕಾರ್ಯಾರಂಭ ಮಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗುರುವಾರ ಮುಂಜಾನೆ ಶಾರದಾ ಗಣಪತಿ ವಿದ್ಯಾಲಯದ ವಿದ್ಯಾರ್ಥಿಗಳು ಬಾಳೆಪುಣಿ ಗ್ರಾಮ ಪಂಚಾಯತ್ಗೆ ಪಾದಯಾತ್ರೆ ನಡೆಸಿ ಬಾರ್ ಜಾಗ ಬದಲಾಯಿಸುವಂತೆ ಆಗ್ರಹಿಸಿದರು. ಈ ಕುರಿತು ಪಂಚಾಯತ್ ಅಧಿಕಾರಿಗಳು ಇನ್ನಷ್ಟೇ ಅಧಿಕೃತ ಕ್ರಮ ಕೈಗೊಳ್ಳಬೇಕಿದೆ.