
ಕೋಲ್ಕತ್ತಾ: ಪಶ್ಚಿಮ ಬಂಗಾಳದಾದ್ಯಂತ (West Bengal) ಪಂಚಾಯತ್ ಚುನಾವಣೆಯ (Panchayat Election) ಮತ ಎಣಿಕೆ (Vote Counting) ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ. ಆದರೂ ಮತ ಎಣಿಕೆ ಕೇಂದ್ರಗಳಲ್ಲಿ ಮತ್ತೆ ಘರ್ಷಣೆ ಏರ್ಪಟ್ಟಿದೆ.
ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್‌ನಲ್ಲಿರುವ ಎಣಿಕೆ ಕೇಂದ್ರದ ಹೊರಗೆ ಕಚ್ಚಾಬಾಂಬ್ ಸ್ಫೋಟಗೊಂಡಿರುವುದಾಗಿ ವರದಿಯಾಗಿದೆ. ಮತ್ತೊಂದೆಡೆ ಹೌರಾ ಮತ ಎಣಿಕೆ ಕೇಂದ್ರದಲ್ಲಿ ಕಾರ್ಯಕರ್ತರು ಜಮಾಯಿಸಿ, ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಗುಂಪನ್ನು ಚದುರಿಸಲು ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ.

ಕಳೆದ ತಿಂಗಳ ಆರಂಭದಲ್ಲಿ ಪಂಚಾಯತ್ ಚುನಾವಣೆಯ ದಿನಾಂಕವನ್ನು ಘೋಷಿಸಿದಾಗಿನಿಂದ ಪಶ್ಚಿಮ ಬಂಗಾಳದಾದ್ಯಂತ ಭಾರೀ ಘರ್ಷಣೆ ಉಂಟಾಗಿ ಇಲ್ಲಿಯವರೆಗೆ 33 ಜನರು ಸಾವನ್ನಪ್ಪಿದ್ದಾರೆ. ಮತದಾನ ನಡೆದ ದಿನ ಜುಲೈ 8ರಂದು ಕೂಡಾ 19 ಜನರ ಸಾವಾಗಿದೆ.

3 ಹಂತದ ಪಂಚಾಯತ್ ಚುನಾವಣೆಗೆ 61 ಸಾವಿರಕ್ಕೂ ಅಧಿಕ ಬೂತ್‌ಗಳಲ್ಲಿ ಕಳೆದ ಶುಕ್ರವಾರ ಮತದಾನ ನಡೆದಿದೆ. 80.71% ರಷ್ಟು ಮತದಾನವಾಗಿದ್ದರೂ ಹಲವೆಡೆ ಮತಪೆಟ್ಟಿಗೆಯನ್ನು ಲೂಟಿ ಮಾಡಿ, ಬೆಂಕಿ ಹಚ್ಚಿ ಹಿಂಸಾಚಾರ ನಡೆಸಲಾಗಿದೆ. ಮತದಾನ ದಿನದಂದು ನಡೆದ ಘರ್ಷಣೆ ಎಷ್ಟು ತೀವ್ರವಾಗಿತ್ತೆಂದರೆ ಸುಮಾರು 696 ಬೂತ್‌ಗಳಲ್ಲಿ ಮರುಮತದಾನ ಮಾಡಬೇಕಾಗಿ ಬಂದಿತ್ತು.
