
ಚಿಕ್ಕಮಂಗಳೂರು, ಜು.11: ಮೂಡಿಗೆರೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದೇವರಮನೆ ಬಳಿ ಯುವಕನೊಬ್ಬನನ್ನು ಕೊಲೆಗೈದು ಶವ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ಮೂಲದ ದಾವೂದ್ ಅಮೀರ್ (25) ಮತ್ತು ಅಫ್ರಿದಿ (23), ಅಬ್ದುಲ್ ರಹೀಜ್ (23) ಮತ್ತು ಮೊಹಮ್ಮದ್ ಇರ್ಷಾದ್ ಎಂದು ಗುರುತಿಸಲಾಗಿದೆ.

ಬಂಟ್ವಾಳ ತಾಲೂಕಿನವರಾದ ಮೊಹಮ್ಮದ್ ಸವಾದ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಮೂಲದ ರಿಝ್ವಾನ್ ಮತ್ತು ಝೈನುಲ್ಲಾ ಅವರನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಗಾಂಜಾ ದಂಧೆಯಿಂದ ಇವರ ಕೊಲೆ ನಡೆದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪಡುಬಿದ್ರಿಯ ಬೆಂಗ್ರೆಯಲ್ಲಿ ಸವಾದ್‌ನನ್ನು ಕೊಲೆ ಮಾಡಿ ಶವವನ್ನು ದೇವರಮನೆಯಲ್ಲಿ ಎಸೆದಿದ್ದಾರೆ ಎಂದು ತಿಳಿದುಬಂದಿದೆ.
