
ಕಳೆದ ಒಂದೂವರೆ ತಿಂಗಳಲ್ಲಿ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾದ 150 ಕೋಟಿ ರೂ. ಬೆಲೆಯ ಡ್ರಗ್ಸ್ ವಸ್ತುಗಳನ್ನು ಪೊಲೀಸರು ಸುಟ್ಟು ಹಾಕಿದ್ದಾರೆ.
ತುಮಕೂರು (ಜು.09): ರಾಜ್ಯದಲ್ಲಿ ಬೀಡುಬಿಟ್ಟಿರುವ ಡ್ರಗ್ಸ್ ದಂಧೆಯ ಕಡಿವಾಣಕ್ಕೆ ಸರ್ಕಾರಿಂದ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾದ 150 ಕೋಟಿ ರೂ. ಬೆಲೆಯ ಡ್ರಗ್ಸ್ ವಸ್ತುಗಳನ್ನು ಪೊಲೀಸರು ಸುಟ್ಟು ಹಾಕಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

ಈ ಕುರಿತು ತುಮಕೂರು ಜಿಲ್ಲೆಯ ಕೊರಟಗೆರೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಡ್ರಗ್ಸ್ ದಂಧೆ ಕಡಿವಾಣಕ್ಕೆ ನಿರ್ಧಾರ ಮಾಡಿದ್ದೇನೆ. ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದ ಪೊಲೀಸರು 150 ಕೋಟಿ ರೂ.ಗೂ ಅಧಿಕ ಮಾದಕ ವಸ್ತುಗಳನ್ನು ಸುಟ್ಟು ಹಾಕಿದ್ದಾರೆ. ಮೊದಲೆಲ್ಲಾ ಹಳ್ಳಿಗಳಲ್ಲಿ ಟೊಮ್ಯಾಟೊ ಗಿಡಗಳ ಮಧ್ಯೆ ಗಾಂಜಾ ಬೆಳೆಯುತಿದ್ದರು. ನಂತರ, ಅದನ್ನ ಒಣಗಿಸಿ ಸೇವಿಸುತ್ತಿದ್ದರು ಈಗ ಮಾತ್ರೆಗಳ ಬಂದಿರುವುದು ದುರಾದೃಷ್ಟಕರ ಎಂದು ಹೇಳಿದರು.

ಡ್ರಗ್ಸ್ ಸೇವನೆಯಿಂದ ನರಮಂಡಲಕ್ಕೆ ನೇರ ಹಾನಿ: ಇನ್ನು ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳು ಹಿಂದೆ ಗಿಡದ ರೂಪದಲ್ಲಿ ಬೆಳೆಯುತ್ತಿದ್ದರು. ಆದರೆ, ಈಗ ಮಾತ್ರೆಗಳ ಸೇವನೆ ಮಾಡುತ್ತಿದ್ದಾರೆ. ಗಾಂಜಾ, ಡ್ರಗ್ಸ್, ಕೊಕೇನ್, ಚರಸ್ ಹಾಗೂ ಹೆರಾಯಿನ್ ಸೇರಿದಂತೆ ವಿವಿಧ ಮಾದಕ ವಸ್ತುಗಳ ಸೇವನೆಯಿಂದ ನೇರವಾಗಿ ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಾದಕ ವಸ್ತುಗಳ ಸಾಗಣೆಯನ್ನು ಹತ್ತಿಕ್ಕಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು