
ಲಕ್ನೋ: ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜನೆ ಮಾಡಿ ದೌರ್ಜನ್ಯ ಎಸಗಿರುವ ಘಟನೆ ಮಾಸುವ ಮುನ್ನವೇ ದಲಿತ (Dalit) ವ್ಯಕ್ತಿಯೊಬ್ಬರನ್ನು ಥಳಿಸಿ, ಚಪ್ಪಲಿ ನೆಕ್ಕಿಸಿರುವ ವಿಕೃತ ಘಟನೆ ಉತ್ತರ ಪ್ರದೇಶದಲ್ಲಿ (Uttar Pradeah) ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಸೋನ್ಭದ್ರಾ ಗ್ರಾಮದಲ್ಲಿ ದಲಿತ ವ್ಯಕ್ತಿಯನ್ನು ಥಳಿಸಿ, ಚಪ್ಪಲಿ ನೆಕ್ಕಿಸಿ, ದೌರ್ಜನ್ಯ ಎಸಗಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಗುರುವಾರ ಸಂಜೆ ನಡೆದಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ವರದಿಗಳ ಪ್ರಕಾರ ಎಲೆಕ್ಟ್ರಿಕಲ್ ಲೈನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ತೇಜ್ಬಲಿ ಸಿಂಗ್ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಾಗಿದ್ದಾಗ ಗ್ರಾಮಸ್ಥರಿಗೆ ಸಹಾಯ ಮಾಡಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಕೋಪಗೊಂಡಿದ್ದ. ಈ ಹಿನ್ನೆಲೆ ತೇಜ್ಬಲಿ ಸಿಂಗ್ ಸಂತ್ರಸ್ತ ರಾಜೇಂದ್ರನ ಮೇಲೆ ಹಲ್ಲೆ ನಡೆಸಿ, ಬಸ್ಕಿ ಹೊಡೆಸಿದ್ದು ಮಾತ್ರವಲ್ಲದೇ ಕಾಲು ಸಮೇತವಾಗಿ ಚಪ್ಪಲಿಯನ್ನು ನೆಕ್ಕಲು ಒತ್ತಾಯಿಸಿ ಅವಮಾನ ಮಾಡಿದ್ದಾನೆ.

ಇದೀಗ ವೀಡಿಯೋ ಸಾಮಾಜಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಉತ್ತರ ಪ್ರದೇಶದ ಪೊಲೀಸರು 1989ರ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಕಾಯಿದೆ ಸೇರಿದಂತೆ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
