
ಪತ್ರಕರ್ತರಿಗೂ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಮಣಿಪಾಲ (ಜು.09): ಪತ್ರಕರ್ತರಿಗೂ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಶನಿವಾರ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಟಿ.ಎಂ.ಎ.ಪೈ ಸಭಾಂಗಣದಲ್ಲಿ ರಾಜ್ಯ ಕಾರ್ಯನಿರತ ಸಂಘದ ವತಿಯಿಂದ, ಉಡುಪಿ ಸಂಘದ ಆಶ್ರಯದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ತಾವು ಹಿಂದೆ ಆರೋಗ್ಯ ಸಚಿವರಾಗಿದ್ದಾಗ ಪತ್ರಕರ್ತರಿಗೆ ಆರೋಗ್ಯ ಭಾಗ್ಯ ಯೋಜನೆಯನ್ನು ವಿಸ್ತರಿಸಲು ಹಲವಾರು ಸಭೆಗಳನ್ನು ನಡೆಸಿ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ಕಾರಣಗಳಿಗೆ ಅದು ಜಾರಿಯಾಗಲಿಲ್ಲ. ಈಗಲೂ ಆ ಯೋಜನೆಯನ್ನು ಜಾರಿಗೊಳಿಸಬಹುದಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯದ ಪತ್ರಕರ್ತರಿಗೆ ನಿವೇಶನಗಳನ್ನು ಒದಗಿಸುವಂತೆ ಬಹಳ ಸಮಯದಿಂದ ಬೇಡಿಕೆ ಇದೆ. ಇದನ್ನು ಈಡೇರಿಸಲು ತಾನು ಸರ್ಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಎಸ್ಪಿ ಅಕ್ಷಯ್ ಹಾಕೆ ಆಗಮಿಸಿದ್ದರು. ರಾಜ್ಯ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.