
ಪುಣೆ: ಡಿಆರ್‌ಡಿಒ (Defence Research and Development Organisation) ವಿಜ್ಞಾನಿ ಪ್ರದೀಪ್ ಕುರುಲ್ಕರ್ ಪಾಕಿಸ್ತಾನಕ್ಕೆ ಭಾರತದ ರಕ್ಷಣಾ ವಿಚಾರಗಳ ಬಗ್ಗೆ ಮಾಹಿತಿಗಳನ್ನು ನೀಡಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ತಿಳಿಸಿದೆ, ಪಾಕಿಸ್ತಾನ ಭಾರತ ರಕ್ಷಣಾ ವಿಚಾರಗಳನ್ನು ತಿಳಿದುಕೊಳ್ಳಲು ಜಾರಾ ದಾಸ್‌ಗುಪ್ತಾ ಎಂಬ ಹೆಸರಿನ ಮಹಿಳೆಯನ್ನು ( ಹೆಸರು ಬದಲಾಯಿಸಿಕೊಂಡಿದ್ದಾರೆ)ಬಳಸಿಕೊಂಡಿದ್ದಾರೆ, ಪಾಕಿಸ್ತಾನದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿಕೊಂಡು ಪ್ರದೀಪ್ ಕುರುಲ್ಕರ್ ಭಾರತದ ಕ್ಷಿಪಣಿ ರಕ್ಷಣಾ ಯೋಜನೆಗಳ ಬಗ್ಗೆ ಹಂಚಿಕೊಂಡಿದ್ದಾರೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.

ಪುಣೆಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಲ್ಯಾಬ್ನ ನಿರ್ದೇಶಕರಾಗಿದ್ದ ಪ್ರದೀಪ್ ಕುರುಲ್ಕರ್ ವಿರುದ್ಧ ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಳೆದ ವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಮೇ 3ರಂದು ಅಧಿಕೃತ ರಹಸ್ಯ ಕಾಯಿದೆಯಡಿ ಗೂಢಚರ್ಯೆ ಆರೋಪದ ಮೇಲೆ ಪ್ರದೀಪ್ ಕುರುಲ್ಕರ್ ಬಂಧಿಸಲಾಗಿದ್ದು, ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರದೀಪ್ ಕುರುಲ್ಕರ್ ಮತ್ತು ‘ಜಾರಾ ದಾಸ್‌ಗುಪ್ತ’ ವಾಟ್ಸಾಪ್ ಕಾಲ್ ಮತ್ತು ವೀಡಿಯೊ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಜಾರಾ ದಾಸ್‌ಗುಪ್ತ ತಾನು ಯುಕೆ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದು, ಅಶ್ಲೀಲ ಸಂದೇಶಗಳು ಮತ್ತು ವೀಡಿಯೊಗಳನ್ನು ಕಳುಹಿಸುವ ಮೂಲಕ ಪ್ರದೀಪ್ ಕುರುಲ್ಕರ್ ಜತೆಗೆ ಸ್ನೇಹ ಬೆಳೆಸಿಕೊಂಡಿದ್ದಳು. ತನಿಖೆಯ ವೇಳೆ ಆಕೆಯ ಐಪಿ ವಿಳಾಸದ ಮೂಲಕ ಪಾಕಿಸ್ತಾನದ ಮಹಿಳೆ ಎಂದು ಪತ್ತೆ ಹಚ್ಚಲಾಗಿದೆ ಎಂದು ಎಟಿಎಸ್ ಆರೋಪಪಟ್ಟಿಯಲ್ಲಿ ತಿಳಿಸಿದೆ.

ಬ್ರಹ್ಮೋಸ್ ಲಾಂಚರ್, ಡ್ರೋನ್, ಯುಸಿವಿ, ಅಗ್ನಿ ಕ್ಷಿಪಣಿ ಲಾಂಚರ್ ಮತ್ತು ಮಿಲಿಟರಿ ಬ್ರಿಡ್ಜಿಂಗ್ ಸಿಸ್ಟಮ್ ಸೇರಿದಂತೆ ಇತರ ವಿಷಯಗಳ ಬಗ್ಗೆ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಈಕೆ ಪ್ರಯತ್ನಿಸಿದ್ದಾಳೆ ಎಂದು ಹೇಳಿದ್ದಾರೆ. ಆಕೆಯ ಮಾತಿಗೆ ಮರುಳಾಗಿ ಕುರುಲ್ಕರ್, ಡಿಆರ್‌ಡಿಒದ ವರ್ಗೀಕೃತ ಮತ್ತು ಸೂಕ್ಷ್ಮ ಮಾಹಿತಿಯನ್ನು ತನ್ನ ವೈಯಕ್ತಿಕ ಫೋನ್‌ನಲ್ಲಿ ಸಂಗ್ರಹಿಸಿ ಅದನ್ನು ಜಾರಾ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಎಟಿಎಸ್ ತನ್ನ ತನಿಖಾ ವರದಿಯಲ್ಲಿ ಹೇಳಲಾಗಿದೆ. ಎಟಿಎಸ್ ಪ್ರಕಾರ ಇಬ್ಬರೂ ಜೂನ್ 2022ರಿಂದ ಡಿಸೆಂಬರ್ 2022 ರವರೆಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ