
ಕೋಲ್ಕತಾ (ಜುಲೈ 8, 2023): ಪಶ್ಚಿಮ ಬಂಗಾಳದಲ್ಲಿ ಶನಿವಾರ ಒಂದೇ ಹಂತದಲ್ಲಿ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸಲಾಗುತ್ತಿದ್ದು, ಸುಮಾರು 5.67 ಕೋಟಿ ಜನ ತಮ್ಮ ಹಕ್ಕು ಚಲಾವಣೆ ಮಾಡ್ತಿದ್ದಾರೆ. ಪ್ರಚಾರದ ವೇಳೆಯೇ ವ್ಯಾಪಕ ಹಿಂಸಾಚಾರ ನಡೆದಿದ್ದು, ಅದರ ಬೆನ್ನಲ್ಲೇ ಮತನಾದ ನಡೆಯುತ್ತಿದೆ. ಈ ನಡುವೆ ಚುನಾವಣೆಗೂ ಹಿಂದಿನ ರಾತ್ರಿ ಮೂವರು ಟಿಎಂಸಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಆಡಳಿತಾರೂಢ ಪಕ್ಷ ಆರೋಪಿಸಿದೆ. ಅಲ್ಲದೆ, ಈ ಸಂಬಂಧ ಸಿಆರ್‌ಪಿಎಫ್ ಸಿಬ್ಬಂದಿ ವಿರುದ್ದ ಟಿಎಂಸಿ ತರಾಟೆಗೆ ತೆಗೆದುಕೊಂಡಿದೆ.

3 ಹಂತದ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗೆ ಬಿಗಿ ಭದ್ರತೆಯ ನಡುವೆ ಮತದಾನ ನಡೆಯುತ್ತಿದ್ದು, ರಾಜ್ಯದ ಹಲವು ಭಾಗಗಳಿಂದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ವರದಿಯಾಗಿವೆ. ಇತ್ತೀಚಿನ ಘಟನೆಯಲ್ಲಿ, ಮುರ್ಷಿದಾಬಾದ್ ಜಿಲ್ಲೆಯ ಉತ್ತರ 24 ಪರಗಣಗಳ ಕದಂಬಗಚಿಯಲ್ಲಿ ಅಬ್ದುಲ್ಲಾ ಅಲಿ ಎಂದು ಗುರುತಿಸಲಾದ ವ್ಯಕ್ತಿಯನ್ನು ಕೊಲ್ಲಲಾಗಿದೆ. ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗದಲ್ಲಿ ಮತ್ತೊಂದು ಸಾವು ವರದಿಯಾಗಿದೆ.

ಇನ್ನು, ಹಿಂಸಾಚಾರದಲ್ಲಿ ಪಕ್ಷದ ಮೂವರು ಕಾರ್ಯಕರ್ತರನ್ನು “ಕೊಲೆ” ಮಾಡಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಶನಿವಾರ ಹೇಳಿಕೊಂಡಿದೆ. ಜೂನ್ 8 ರಂದು ಚುನಾವಣೆ ಘೋಷಣೆಯಾದಾಗಿನಿಂದ, ರಾಜ್ಯದಲ್ಲಿ ಭುಗಿಲೆದ್ದ ವ್ಯಾಪಕ ಹಿಂಸಾಚಾರವಾಗಿದ್ದು, ಸುಮಾರು 18 ಜನ ಬಲಿಯಾಗಿದ್ದಾರೆ ಎಂದೂ ತಿಳಿದುಬಂದಿದೆ. “ನಮ್ಮ ಪಕ್ಷದ ಮೂವರು ಕಾರ್ಯಕರ್ತರು ರೆಜಿನಗರ, ತುಫಂಗಂಜ್ ಮತ್ತು ಖಾರ್‌ಗ್ರಾಮ್‌ನಲ್ಲಿ ಕೊಲೆಯಾಗಿದ್ದಾರೆ ಮತ್ತು ಇಬ್ಬರು ಡೊಮ್‌ಕೋಲ್‌ನಲ್ಲಿ ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿ, ಪಶ್ಚಿಮ ಬಂಗಾಳ ಸಿಪಿಐ(ಎಂ) ಮತ್ತು ಪಶ್ಚಿಮ ಬಂಗಾಳ ಕಾಂಗ್ರೆಸ್ ಕೇಂದ್ರ ಪಡೆಗಳ ನಿಯೋಜನೆಗಾಗಿ ಕೂಗುತ್ತಿವೆ. ಹಾಗಾದರೆ, ಕೇಂದ್ರ ಪಡೆಗಳು ಹೆಚ್ಚು ಅಗತ್ಯವಿರುವಾಗ ಎಲ್ಲಿವೆ?…” ಎಂದು ಟಿಎಂಸಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.
“ಇದು ಮತದಾನ ಪ್ರಾರಂಭವಾಗುವ ಮೊದಲು ಜನರ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ಅವರ ಕಡೆಯಿಂದ ಭಾರಿ ವೈಫಲ್ಯವನ್ನು ಸೂಚಿಸುತ್ತದೆ” ಎಂದೂ ಅವರು ಹೇಳಿದರು. ಅಲ್ಲದೆ, ಕೂಚ್‌ಬೆಹಾರ್‌ನ ಸೀತಾಯ್‌ನಲ್ಲಿರುವ ಬರವಿತಾ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಯನ್ನು ಧ್ವಂಸಗೊಳಿಸಲಾಗಿದೆ ಮತ್ತು ಮತಪತ್ರಗಳಿಗೆ ಬೆಂಕಿ ಹಚ್ಚಲಾಗಿದೆ. ಪುಂಡ ಪೋಕರಿಗಳ ದಾಳಿಯಲ್ಲಿ ಮತಗಟ್ಟೆ ಏಜೆಂಟ್ ಕೂಡ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ನಿನ್ನೆ ಒಬ್ಬ ಸಾವು:
ಪಂಚಾಯತ್ ಚುನಾವಣೆಗೆ ಒಂದು ದಿನ ಮೊದಲು ರಾಜ್ಯದ ಹಲವು ಭಾಗಗಳಲ್ಲಿ ಹಿಂಸಾಚಾರ ನಡೆದಿದ್ದು, ಗುಂಡು ತಗುಲಿ ಕಾಂಗ್ರೆಸ್‌ನ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಮುರ್ಷಿದಾಬಾದ್‌ನಲ್ಲಿ ನಡೆದ ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ಅರವಿಂದ್ ಮಂಡಲ್ ಮೃತಪಟ್ಟಿದ್ದಾರೆ. ಇದರಲ್ಲಿ ಟಿಎಂಸಿ ಕೈವಾಡ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಟಿಎಂಸಿ ಈ ಆರೋಪವನ್ನು ಅಲ್ಲಗಳೆದಿದೆ.
ಹಾಗೂ, ಕೂಚ್ ಬೆಹಾರ್‌ನಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಬಿಜೆಪಿಯ ನಾಲ್ವರು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಈವರೆಗೆ ಪಶ್ಚಿಮ ಬಂಗಾಳದಲ್ಲಿ 18 ಮಂದಿ ಮೃತಪಟ್ಟಿದ್ದು, ಹಲವು ಪ್ರದೇಶಗಳಲ್ಲಿ ಬಾಂಬ್ ಮತ್ತು ಗುಂಡಿನ ದಾಳಿಗಳು ನಡೆದಿವೆ. ಇದರ ನಡುವೆಯೇ ಹಿಂಸಾಚಾರಕ್ಕೆ ತುತ್ತಾಗಿರುವ ಹಲವು ಪ್ರದೇಶಗಳಿಗೆ ರಾಜ್ಯಪಾಲರು ಭೇಟಿ ನೀಡಿದ್ದಾರೆ.