
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತ ಪೊಲೀಸರ (Lokayukta Police) ವಶದಲ್ಲಿರುವ ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ರೈ (Ajit Rai) ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಅನುಕಂಪದ ಆಧಾರದಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಪಡೆದುಕೊಂಡಿದ್ದ ಅಜಿತ್ ರೈ ನಂತರ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಬಡ್ತಿ ಪಡೆದಿದ್ದರು. ಪ್ರಸ್ತುತ ಕೆ.ಆರ್. ಪುರಂನಲ್ಲಿ ತಹಶೀಲ್ದಾರ್ (KR Puram Tahsildar) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದಾಯಕ್ಕಿಂತ 69% ಹೆಚ್ಚುವರಿ ಆಸ್ತಿ ಹೊಂದಿರುವ ಆರೋಪದಲ್ಲಿ ಅಜಿತ್ ರೈ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಭ್ರಷ್ಟಾಚಾರ ಆರೋಪದಡಿ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಅಜಿತ್ ರೈ ಮನೆ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಸಹಕಾರನಗರದ ನಿವಾಸ ಸೇರಿ 12 ಕಡೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದರು.

ಪರಿಶೀಲನೆ ವೇಳೆ 40 ಲಕ್ಷ ರೂ. ನಗದು, ಕೋಟ್ಯಂತರ ಮೌಲ್ಯದ ಭೂ ದಾಖಲಾತಿ ಪತ್ರಗಳು, ದುಬಾರಿ ಬೆಲೆಯ ಕಾರು ಖರೀದಿಸಿದ ರಶೀದಿಗಳು, ದೇಶ-ವಿದೇಶಿ ಬ್ರ್ಯಾಂಡ್‌ನ ಮದ್ಯ ಪತ್ತೆಯಾಗಿತ್ತು. ಸತತ 30 ಗಂಟೆಗಳ ಪರಿಶೀಲನೆ ವೇಳೆ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಜಿತ್ ರೈನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.

ಆರೋಪಿಯನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಲೋಕಾಯುಕ್ತ ಪೊಲೀಸರು 10 ದಿನಗಳ ಕಸ್ಟಡಿಗೆ ಕೇಳಿದ್ದರು. ಆದರೆ ನ್ಯಾಯಾಲಯ 7 ದಿನ ಪೊಲೀಸ್ ಕಸ್ಟಡಿಗೆ ಅವಕಾಶ ನೀಡಿದೆ. ಅಜಿತ್ ರೈ ಪುತ್ತೂರಿನಲ್ಲೂ ಆಸ್ತಿ ಮಾಡಿದ್ದು, ಸ್ವತಃ ಊರಿಗೆ ಕರೆದುಕೊಂಡು ಹೋಗಿ ತನಿಖೆ ನಡೆಸಲು ಪೊಲೀಸರಿಗೆ ನ್ಯಾಯಾಲಯ ಅವಕಾಶ ನೀಡಿತ್ತು.
