
Last updated: 2023/06/29 at 12:08 PM
ದಾವಣಗೆರೆ: ಕೊಲ್ಲಾಪುರದಿಂದ ಕೊಡಗಿನ ವಿರಾಜಪೇಟೆಗೆ ಕಾರಿನಲ್ಲಿ ತೆರಳುತ್ತಿದ್ದ ಉದ್ಯಮಿಯ ಕಾರನ್ನು ಕಳ್ಳರು ಅಡ್ಡಗಟ್ಟಿ 95 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಚನ್ನಗಿರಿಯಲ್ಲಿ ನಡೆದಿದೆ.
ದುಬೈನಲ್ಲಿ ತೈಲ ವ್ಯಾಪಾರ ಮಾಡುತ್ತಿರುವ ನಬೀಲ್ಕೆ ಎಂಬವವರ ಕುಟುಂಬ ಕಾರಿನಲ್ಲಿ ಪ್ರಯಾಣ ಮಾಡುತ್ತಿತ್ತು. ಈ ವೇಳೆ ಚನ್ನಗಿರಿ (Channagiri) ತಾಲ್ಲೂಕಿನ ಬೀರೂರು ರಾಜ್ಯ ಹೆದ್ದಾರಿಯಲ್ಲಿನ ಬುಕ್ಕಾಂಬುದಿ ಕೆರೆ ಬಳಿ ದರೋಡೆಕೋರರು ಕಾರನ್ನು ಅಡ್ಡಗಟ್ಟಿ 95 ಲಕ್ಷ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆ ಜೂ. 18ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ (Maharashtra) ಕೊಲ್ಲಾಪುರ ಜಿಲ್ಲೆಯ ಸಾನೆ ಗುರೂಜಿ ಪಟ್ಟಣದಲ್ಲಿ ನಬೀಲ್ಕೆಯವರ ಕುಟುಂಬ ಚಿನ್ನಾಭರಣದ ಅಂಗಡಿ ನಡೆಸುತ್ತಿತ್ತು. ಅಲ್ಲಿದ್ದ ಚಿನ್ನವನ್ನು ಮಾರಾಟ ಮಾಡಿ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಅಂಗಡಿ ತೆರೆಯಲು ಹಣದೊಂದಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೀಲೇಶ್ ಹಾಗೂ ಅಭಿಜಿತ್ ಬುರುತ್ತಿದ್ದಾಗ ಈ ಘಟನೆ ನಡೆದಿದೆ. 10 ರಿಂದ 15 ಜನ ದರೋಡೆಕೋರರ ತಂಡ ಬುಕ್ಕಾಂಬುದಿ ಕೆರೆ ಬಳಿ ಕಾರನ್ನು ಅಡ್ಡಗಟ್ಟಿ, ಪಿಸ್ತೂಲ್ ತೋರಿಸಿ ಹಣ ದೋಚಿ ಪರಾರಿಯಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಕಾರಿನಲ್ಲಿದ್ದ ನೀಲೇಶ್ ಹಾಗೂ ಅಭಿಜಿತ್‍ನನ್ನು ಕರೆದುಕೊಂಡು ಹೋಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಅಂಗಡಿ ಮಾಲೀಕ ನಬೀಲ್ಕೆ, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬುಕ್ಕಾಂಬುದಿ ಕೆರೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ವ್ಯಾಪ್ತಿಗೆ ಒಳಪಡುವುದರಿಂದ ಪ್ರಕರಣವನ್ನು ಚನ್ನಗಿರಿ ಪೊಲೀಸರು ಅಜ್ಜಂಪುರ ಠಾಣೆಗೆ ವರ್ಗಾಯಿಸಿದ್ದಾರೆ.