
5 ಕೆಜಿ ಅಕ್ಕಿಯ ಜತೆಗೆ ತಲಾ 1 ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ನೀಡಲು ಸರ್ಕಾರ ತೀರ್ಮಾನ ಮಾಡಿದೆ.
ಬೆಂಗಳೂರು (ಜೂನ್ 28, 2023): ರಾಜ್ಯ ಸರ್ಕಾರದ ಗ್ಯಾರಂಟಿಯಾದ ಅಕ್ಕಿ ಭಾಗ್ಯಕ್ಕೆ ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ. ಪ್ರತಿ ಬಿಪಿಎಲ್ ಕಾರ್ಡುದಾರರಿಗೂ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ರಾಜ್ಯ ಸರ್ಕಾರ ಗ್ಯಾರಂಟಿ ನೀಡಿತ್ತು. ಆದರೆ, ಸದ್ಯಕ್ಕೆ ಅಕ್ಕಿ ನೀಡಲು ಸಾಧ್ಯವಾಗದ ಕಾರಣ 5 ಕೆಜಿ ಅಕ್ಕಿಯ ಜತೆಗೆ ಹಣ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಜುಲೈ 1 ರಿಂದಲೇ ಇದು ಜಾರಿಗೆ ಬರಲಿದೆ.

ಹೌದು, 5 ಕೆಜಿ ಅಕ್ಕಿಯ ಜತೆಗೆ ತಲಾ 1 ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಈ ಹಿನ್ನೆಲೆ ಬಿಪಿಎಲ್ ಕಾರ್ಡುದಾರರಿಗೆ ಬಂಪರ್ ನೀಡಿದೆ ಸರ್ಕಾರ. ಸದ್ಯಕ್ಕೆ ಅಕ್ಕಿ ಕೊಡಲು ತೀರ್ಮಾನ ಮಾಡಿದೆ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಆಹಾರ ಸಚಿವ ಮುನಿಯಪ್ಪ, ಬಿಪಿಎಲ್ ಕಾರ್ಡುದಾರರ ಅಕೌಂಟ್‌ಗೆ ಹಣ ಹಾಕ್ತೇವೆ. ಶೇ. 99 ರಷ್ಟು ಕಾರ್ಡ್‌ದಾರರ ಬಳಿ ಅಕೌಂಟ್ ಇದೆ. ಅವರ ಅಕೌಂಟ್‌ಗೆ ಪ್ರತಿಯೊಬ್ಬರಿಗೂ 170 ರೂ. ಹಣ ನೀಡಲಾಗುತ್ತದೆ, ಕುಟುಂಬದ ಕಾರ್ಡ್ ಹೋಲ್ಡರ್ ಅಕೌಂಟ್‌ಗೆ ಹಣ ಹೋಗುತ್ತದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ಸಿಗುವ ತನಕ ಹಣ ನೀಡಲು ತೀರ್ಮಾನ ಮಾಡಲಾಗಿದೆ ಎಂದೂ ಅವರು ಹೇಳಿದ್ರು.
ಅಲ್ಲದೆ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಹ ಮಾತನಾಡಿದ್ದು, 5 ಕೆಜಿಯ ಅಕ್ಕಿಯ ಜತೆಗೆ ಅಕ್ಕಿಯ ಹಣ ಕೊಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ರು. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಕೇಂದ್ರ ಸರ್ಕಾರ ಅಕ್ಕಿ ಕೊಡಲು ಆಗಲ್ಲ ಎಂದಿದೆ. ನಾವು ಪುಕ್ಕಟೆ ಕೇಳ್ತಾ ಇಲ್ಲ, ಆದರೂ ಅವರು ರಾಜಕೀಯ ಮಾಡ್ತಿದ್ದಾರೆ. ಅಕ್ಕಿ ಕೊಡುವ ಕೆಲಸಕ್ಕೆ ಕಲ್ಲು ಹಾಕ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಈ ಮೂಲಕ ಅನ್ನ ಭಾಗ್ಯಕ್ಕೆ ಸದ್ಯಕ್ಕೆ ಪರಿಹಾರ ಸಿಕ್ಕಂತಾಗಿದ್ದು, ಜುಲೈ 1 ರಿಂದ 5 ಕೆಜಿ ಅಕ್ಕಿಯ ಜತೆಗೆ ಉಳಿದ 5 ಕೆಜಿ ಅಕ್ಕಿಗೆ ಬೇಕಾದ ಹಣವನ್ನೂ ನೀಡುತ್ತದೆ.
ಅಕ್ಕಿ ಸಿಗವ ವರೆಗೆ ಮಾತ್ರ ಹಣ
ಅಕ್ಕಿ ಸಿಗುವವರೆಗೆ ಮಾತ್ರ ಪರ್ಯಾಯ ವ್ಯವಸ್ಥೆಯಾಗಿ ಹಣ ನೀಡುತ್ತಿದ್ದೇವೆ. ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಮುನಿಯಪ್ಪ ತಿಳಿಸಿದ್ದಾರೆ. ಈ ಮಧ್ಯೆ, ಒಟ್ಟು 15 ವಿಷಯಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ನಿರ್ಣಯ ಕೈಗೊಂಡಿದ್ದೇವೆ. ಈ ಪೈಕಿ ನಾಲ್ಕು ವಿಷಯಗಳು ಲೋಕಾಯುಕ್ತಕ್ಕೆ ಸಂಬಂಧಪಟ್ಟಿದ್ದು. ಕರ್ನಾಟಕ ಲೋಕಾಯುಕ್ತದ ಉಪನಿರ್ದೇಶಕರು, ಲೆಕ್ಕಪತ್ರ ಅಪರ ನಿಬಂಧಕರು ಗುತ್ತಿಗೆ ಮೇಲೆ ನೇಮಕ ಆಗಿದ್ದರು. ಇವರ ಸೇವೆಯನ್ನು ಒಂದು ವರ್ಷ ಗುತ್ತಿಗೆ ಆಧಾರದ ಮೇಲೆ ಮುಂದುವರಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಹೆಚ್ಕೆ ಪಾಟೀಕ್ ತಿಳಿಸಿದರು.