
ಟಿವಿ ವಿಚಾರಕ್ಕಾಗಿ ದಂಪತಿ ಮಧ್ಯೆ ಜಗಳವಾಗಿ ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ಭಾನುವಾರದಂದು ಕಾರ್ಕಳ ತಾಲೂಕು ನಲ್ಲೂರು ಎಂಬಲ್ಲಿ ನಡೆದಿದೆ. ಮೃತಪಟ್ಟ ದಂಪತಿ ಯಲ್ಲಾಪುರ ಮೂಲದವರು ಎಂದು ತಿಳಿದು ಬಂದಿದೆ.
ಕಾರ್ಕಳ (ಜೂ.26): ಟಿವಿ ವಿಚಾರಕ್ಕಾಗಿ ದಂಪತಿ ಮಧ್ಯೆ ಜಗಳವಾಗಿ ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ಭಾನುವಾರದಂದು ಕಾರ್ಕಳ ತಾಲೂಕು ನಲ್ಲೂರು ಎಂಬಲ್ಲಿ ನಡೆದಿದೆ. ಮೃತಪಟ್ಟ ದಂಪತಿ ಯಲ್ಲಾಪುರ ಮೂಲದವರು ಎಂದು ತಿಳಿದು ಬಂದಿದೆ. ಇಮ್ಯಾನುಲ್ ಸಿದ್ದಿ (40) ಹಾಗೂ ಯಶೋಧಾ (32) ಎಂಬವರೇ ಸಾವಿಗೀಡಾದ ದಂಪತಿ. ಭಾನುವಾರ ಬೆಳಗ್ಗೆ ಟಿವಿ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಜಗಳವಾಗಿದ್ದು, ಈ ವೇಳೆ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದರು.

ಯಶೋಧಾರನ್ನು ರಕ್ಷಿಸಲು ತೆರಳಿದ್ದ ಪತಿ ಇಮ್ಯಾನುಲ್ ಕೂಡ ನೀರುಪಾಲಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್, ಯಶೋಧಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು. ದಂಪತಿ ಸಾವಿನಿಂದ ಅವರ 10 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ ಅನಾಥರಾಗಿದ್ದಾರೆ. ಡಿವೈಎಸ್ಪಿ ಅರವಿಂದ್ ಕಲಗುಜ್ಜಿ, ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ತೇಜಸ್ವಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
