
Ashraf Kammaje |
Updated on:Jun 24, 2023 | 1:17 PM
ಬಿಜೆಪಿಯ ಕರ್ನಾಟಕ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಬೆಂಗಳೂರು: ಬಿಜೆಪಿಯ (BJP) ಕರ್ನಾಟಕ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕಟೀಲ್ (Nalin Kumar Kateel) ಅವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿರುವ ಬಗ್ಗೆ ಬಳ್ಳಾರಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೇನೆ. 4 ವರ್ಷಗಳಿಂದ ನಾನು ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು ತಿಳಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಕುರಿತಂತೆ ಪಕ್ಷವು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾಗಿ ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಸುದ್ದಿ ಬಿತ್ತರಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ಸೋಲಿನ ಹೊಣೆ ಹೊತ್ತು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಈ ಬಗ್ಗೆ ಪಕ್ಷದ ನಾಯಕರಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ತಿಳಿಸಿದ್ದೆ ಎಂದು ಕಟೀಲ್ ಹೇಳಿದ್ದರು.

ವಿಧಾನಸಭೆ ಸೋಲಿನ ಬಳಿಕ ಕಟೀಲ್ ಅವರ ರಾಜೀನಾಮೆಗೆ ರಾಜ್ಯದ ಅನೇಕ ಕಡೆಗಳಲ್ಲಿ ಪಕ್ಷದ ಕಾರ್ಯಕರ್ತರಿಂದ ಆಗ್ರಹ ವ್ಯಕ್ತವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಬಗ್ಗೆ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ, ಪಕ್ಷದ ವರಿಷ್ಠರು ಹಾಗೂ ಇತರ ನಾಯಕರು ನಳಿನ್ ಅವರನ್ನು ಸಮರ್ಥಿಸಿ ಹೇಳಿಕೆಗಳನ್ನು ನೀಡಿದ್ದರು