
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ಕಿ ಫೈಟ್ ರಾಷ್ಟ್ರ ರಾಜಧಾನಿ ದೆಹಲಿಗೆ ಶಿಫ್ಟ್ ಆಗುವ ಸಾಧ್ಯತೆಗಳಿದೆ.ಅನ್ನಭಾಗ್ಯ (Anna Bhagya) ಯೋಜನೆಗೆ ಅಕ್ಕಿ ನೀಡಲು ಭಾರತೀಯ ಆಹಾರ ನಿಗಮ ನಿರಾಕರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ದೆಹಲಿ ಪ್ರವಾಸ (Delhi) ಹಮ್ಮಿಕೊಂಡಿದ್ದು, ತಮ್ಮ ಪ್ರವಾಸ ವೇಳೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ (Piyush Goyal) ಅವರನ್ನ ಭೇಟಿ ಮಾಡಿ ಅಕ್ಕಿ ನೀಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಹಲವು ರಾಜ್ಯಗಳಲ್ಲಿ ಅಕ್ಕಿಗಾಗಿ ರಾಜ್ಯ ಸರ್ಕಾರ ಪ್ರಯತ್ನಿಸಿದರೂ ದುಬಾರಿ ಬೆಲೆ ತೆರಬೇಕಾದ ಅನಿವಾರ್ಯತೆ ಹಿನ್ನಲೆ ಸಿದ್ದರಾಮಯ್ಯ ಮತ್ತೊಮ್ಮೆ ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನೂ ಭೇಟಿಯಾಗುತ್ತಿದ್ದು ಸೌಹಾರ್ದಯುತ ಮಾತುಕತೆ ನಡೆಯಲಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ತಮ್ಮ ದೆಹಲಿ ಪ್ರವಾಸದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರನ್ನು ಭೇಟಿಯಾಗುತ್ತಿದ್ದು ಸಿಎಂ ಆದ ಬಳಿಕ ಸೌಜನ್ಯಯುತ ಭೇಟಿ ಮಾಡುತ್ತಿದ್ದಾರೆ.
