
ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಆದರೆ ಅದರ ವಿರುದ್ಧ ನಾವು ಬೀದಿಗಿಳಿಯುವುದಿಲ್ಲ ಎಂದು ಮುಸ್ಲಿಮರ ಪ್ರಮುಖ ಸಂಸ್ಥೆಯಾದ ಜಮೀಯತ್ ಮುಖ್ಯಸ್ಥ ಆರ್ಷದ್ ಮದನಿ ಹೇಳಿದ್ದಾರೆ. ಭಾನುವಾರ ಈ ಬಗ್ಗೆ ಮಾತನಾಡಿರುವ ಅವರು ‘1,300 ವರ್ಷಗಳಿಂದ ನಾವು ನಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಹೊಂದಿದ್ದೇವೆ. ನಾವು ಅದನ್ನೇ ಅನುಸರಿಸುತ್ತೇವೆ. ಯುಸಿಸಿಯನ್ನು ವಿರೋಧಿಸುತ್ತೇವೆಯಾದರೂ ಅದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲು ನಾವು ಇಷ್ಟಪಡುವುದಿಲ್ಲ. ಪ್ರತಿಭಟನೆ ಹೆಚ್ಚಾದಷ್ಟೂ ಹಿಂದೂ-ಮುಸ್ಲಿಮರು ಪರಸ್ಪರ ದೂರವಾಗುತ್ತಾರೆ. ಇದರಿಂದ ದುರುದ್ದೇಶವುಳ್ಳ ಜನರ ಧ್ಯೇಯ ಈಡೇರುತ್ತದೆ. ಆದರೂ ಈ ಕಾನೂನಿನ ಅಗತ್ಯವಿರಲಿಲ್ಲ ಎಂದಿದ್ದಾರೆ.

ಯುಸಿಸಿ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಆಹ್ವಾನಿಸಿದ ಕಾನೂನು ಆಯೋಗ
ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ, ಬಹುಚರ್ಚಿತ ಏಕರೂಪ ನಾಗರಿಕ ಸಂಹಿತೆ ವಿಷಯಕ್ಕೆ ಮತ್ತೆ ಜೀವ ಬಂದಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಅಗತ್ಯದ ಕುರಿತಂತೆ ಹೊಸದಾಗಿ ಪರಿಶೀಲನೆ ನಡೆಸಲು ನಿರ್ಧರಿಸಿರುವ ಕಾನೂನು ಆಯೋಗವು, ಸಾರ್ವಜನಿಕರು ಮತ್ತು ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯ ಆಹ್ವಾನಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ಕಾನೂನು ಆಯೋಗವು, ಆಸಕ್ತರು ಪ್ರಕಟಣೆ ಹೊರಡಿಸಿದ 30 ದಿನಗಳಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದೆ. ಈ ಹಿಂದೆ 21ನೇ ಕಾನೂನು ಆಯೋಗ ಕೂಡ ಈ ವಿಷಯವನ್ನು ಪರಿಶೀಲನೆ ಮಾಡಿ, ಎರಡು ಬಾರಿ ಸಾರ್ವಜನಿಕರು ಮತ್ತು ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯ ಆಹ್ವಾನಿಸಿತ್ತು. 2018ರಲ್ಲಿ ಆಯೋಗದ ಅವಧಿ ಮುಕ್ತಾಯದ ವೇಳೆ ‘ಕೌಟುಂಬಿಕ ಕಾನೂನಿನಲ್ಲಿ ಸುಧಾರಣೆ’ ಹೆಸರಲ್ಲಿ ಅದು ಸಮಾಲೋಚನಾ ವರದಿ ಪ್ರಕಟಿಸಿತ್ತು.
ಆದರೆ ‘ಸಮಾಲೋಚನಾ ವರದಿ ಪ್ರಕಟಿಸಿ ಈಗಾಗಲೇ 3 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ, ಏಕರೂಪ ನಾಗರಿಕ ಸಂಹಿತೆಯ ಪ್ರಸ್ತುತತೆ, ಅದರ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಮತ್ತು ವಿವಿಧ ನ್ಯಾಯಾಲಯಗಳು ಹೊರಡಿಸಿರುವ ಆದೇಶಗಳನ್ನು ಗಮನಿಸಿ 22ನೇ ಕಾನೂನು ಆಯೋಗವು, ವಿಷಯದ ಕುರಿತು ಹೊಸದಾಗಿ ಸಮಾಲೋಚನೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದೆ. ಹೀಗಾಗಿ ಆಯೋಗವು ಮತ್ತೊಮ್ಮೆ ಸಾರ್ವಜನಿಕರು, ಧಾರ್ಮಿಕ ಸಂಘಟನೆಗಳಿಂದ ವಿಷಯದ ಕುರಿತು ಅಭಿಪ್ರಾಯ ಆಹ್ವಾನಿಸಲು ನಿರ್ಧರಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.