
ಕಲಬುರಗಿ: ಹೆಡ್‍ಕಾನ್ಸ್ಟೇಬಲ್ (Head Constable) ಮೇಲೆ ಟ್ರ್ಯಾಕ್ಟರ್ (Tractor) ಹರಿಸಿ ಕೊಲೆ ಮಾಡಿದ್ದ ಮರಳು ದಂಧೆಕೋರನನ್ನು (Sand Mafia) ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರೋಪಿಯನ್ನು ಸಾಯಿಬಣ್ಣ ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್ ಚಾಲಕ ಸಿದ್ದಣ್ಣ ಮತ್ತು ಸಾಯಿಬಣ್ಣ ಇಬ್ಬರು ಸಹೋದರರು. ಆರೋಪಿ ಸಿದ್ದಣ್ಣನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು ಎಂದು ತಿಳಿದು ಬಂದಿದೆ.

ಸಾಯಿಬಣ್ಣ ವಿಜಯಪುರ (Vijayapur) ಜಿಲ್ಲೆಯ ಆಲಮೇಲ ಪಟ್ಟಣದ ಹೊರವಲಯದ ಜಮೀನಿನಲ್ಲಿ ಅಡಗಿ ಕುಳಿತ್ತಿದ್ದ. ಆತನನ್ನು ಬಂಧಿಸಿ ಕಲಬುರಗಿಗೆ ಕರೆತರುವಾಗ, ಜೇರಟಗಿ ಗ್ರಾಮದ ಮಧ್ಯೆ ಮೂತ್ರ ವಿಸರ್ಜನೆಗೆ ಎಂದು ವಾಹನ ನಿಲ್ಲಿಸಲು ಮನವಿ ಮಾಡಿದ್ದಾನೆ. ಈ ವೇಳೆ ಲುಂಗಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಬಟನ್ ಚಾಕುವಿನಿಂದ ಯಡ್ರಾಮಿ ಠಾಣೆ ಪಿಎಸ್‍ಐ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್‍ಐ ಬಸವರಾಜ್ ಆತ್ಮರಕ್ಷಣೆಗಾಗಿ ಆರೋಪಿ ಸಾಯಿಬಣ್ಣ ಕಾಲಿಗೆ ಎರಡು ಸುತ್ತು ಫೈರಿಂಗ್ ಮಾಡಿ ಬಂಧಿಸಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.