
ಸಂವಿಧಾನ ಬದಲಿಸುತ್ತೇವೆ ಎಂದಿದ್ದ ಬಿಜೆಪಿಯವರನ್ನೇ ಈ ರಾಜ್ಯದಲ್ಲಿ ನಾವು-ನೀವು ಬದಲಾಯಿಸಿದ್ದೇವೆ. ಇದು 2024ರ ಲೋಕಸಭೆ ಚುನಾವಣೆಯಲ್ಲೂ ಪ್ರತಿಧ್ವನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಬೆಂಗಳೂರು (ಜೂ.10): ಸಂವಿಧಾನ ಬದಲಿಸುತ್ತೇವೆ ಎಂದಿದ್ದ ಬಿಜೆಪಿಯವರನ್ನೇ ಈ ರಾಜ್ಯದಲ್ಲಿ ನಾವು-ನೀವು ಬದಲಾಯಿಸಿದ್ದೇವೆ. ಇದು 2024ರ ಲೋಕಸಭೆ ಚುನಾವಣೆಯಲ್ಲೂ ಪ್ರತಿಧ್ವನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಶುಕ್ರವಾರ ರಾಜ್ಯದ ದಲಿತ ಸಂಘಟನೆಗಳು ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ‘ಭೀಮ ಸಂಕಲ್ಪ’ ಸಮಾವೇಶವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು’ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ರಾಷ್ಟಾ್ರಧ್ಯಕ್ಷರಾಗಿದ್ದ ಅಮಿತ್ ಶಾ ಅವರಾಗಲಿ, ಪ್ರಧಾನಿ ಮೋದಿ ಅವರಾಗಲಿ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತರು. ಆದರೆ, ನಾವು-ನೀವು ಸುಮ್ಮನೆ ಕೂರಲಿಲ್ಲ. ಸಂವಿಧಾನ ಬದಲಾಯಿಸಲು ಬಂದವರನ್ನೇ ಬದಲಾಯಿಸಿದ್ದೀವಿ. ಈ ಬಾರಿ ವಿಧಾನಸಭಾ ಚುನಾವಣೆಯ ಫಲಿತಾಂಶವೇ 2024ರಲ್ಲೂ ಮರುಕಳಿಸಬೇಕು ಎಂದರು.

ಮನುಸ್ಮೃತಿಯ ಆರಾಧಕರಾದ ಬಿಜೆಪಿ, ಆರ್‌ಎಸ್‌ಎಸ್‌ನವರು ಸಂವಿಧಾನ ವಿರೋಧಿಗಳು. ಅಧಿಕಾರಕ್ಕಾಗಿ ಅವರೊಂದಿಗೆ ಸೇರಿರುವ ಶೋಷಿತ ಸಮುದಾಯಗಳ ಪ್ರತಿನಿಧಿಗಳು ಮನುಸ್ಮೃತಿ ಆರಾಧಕರಾಗಿ ಸಂವಿಧಾನ ವಿರೋಧಿಗಳಾಗಿದ್ದಾರೆ. ವಿಗ್ರಹ ಇಟ್ಟುಕೊಂಡು ವಿಚಾರಗಳನ್ನು ಕೊಲ್ಲುವುದು ಬಿಜೆಪಿ ಪರಿವಾರದ ಚಾಳಿ. ಸಂವಿಧಾನ ವಿರೋಧಿಸುವ ಬಿಜೆಪಿ ಚುನಾವಣೆಗಾಗಿ ಅಂಬೇಡ್ಕರ್ ಪ್ರತಿಮೆ ಇಟ್ಟುಕೊಂಡು ನಾಟಕವಾಡುತ್ತಿದೆ ಎಂದು ಟೀಕಿಸಿದರು.

ಸಾಮಾಜಿಕ, ಆರ್ಥಿಕ ಅಸಮಾನತೆ ತೊಡೆದು ಹಾಕದಿದ್ದರೆ ಈ ಸ್ವಾತಂತ್ರ್ಯ ಸೌಧವನ್ನು ದೇಶದ ಜನರೇ ಧ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಜಾತಿ ಸಮಾಜಕ್ಕೆ ಚಲನೆ ಇರುವುದಿಲ್ಲ. ಚಾಲನೆ ಸಿಗಬೇಕಾದರೆ ಸಂವಿಧಾನಬದ್ಧವಾದ ಜಾತ್ಯತೀತ ಮೌಲ್ಯಗಳು ಜಾರಿಯಾಗಿ ಶೋಷಿತ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕವಾಗಿ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಈ ಅವಕಾಶಗಳನ್ನು ಕಲ್ಪಿಸುವುದೇ ನನ್ನ ರಾಜಕೀಯ ಬದ್ಧತೆ ಎಂದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ 11 ಸಾವಿರ ಪಂಚಾಯಿತಿಗಳಲ್ಲಿ ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞೆ ಮಾಡಲಾಗಿತ್ತು. ಎಂದರು