
ಚಾಮರಾಜನಗರ: ಗೋಲ್ವಾಳ್ಕರ್ (Golwalkar), ಸಾವರ್ಕರ್ (Savarkar) ಇತ್ಯಾದಿ ಹುಸಿ ದೇಶ ಭಕ್ತರ ಪಾಠ ತೆಗೆಯಬೇಕು. ಈ ಪಾಠಗಳನ್ನು ಮಕ್ಕಳಿಗೆ ಬೋಧಿಸಬಾರದು. ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ (Kum Veerabhadrappa) ಆಗ್ರಹಿಸಿದರು.
ಚಾಮರಾಜನಗರದಲ್ಲಿ (Chamarajanagara) ಮಾತನಾಡಿದ ಅವರು, ಹಿಂದಿನ ಸರ್ಕಾರ ಮನುಷ್ಯ ವಿರೋಧಿ, ದೇಶ ವಿರೋಧಿ, ಸಮಾಜ ವಿರೋಧಿ ಪಠ್ಯ ಅಳವಡಿಸಿದ್ದು ತಪ್ಪು. ಇದು ನಮ್ಮ ಸಂವಿಧಾನಕ್ಕೆ ಮಾಡಿದ ಅಪಮಾನ. ಹೊಸ ಸರ್ಕಾರ ಇದನ್ನು ಬದಲಿಸಲಿ ಎಂದು ಒತ್ತಾಯಿಸಿದರು.

ಬರಗೂರು ರಾಮಚಂದ್ರಪ್ಪ ನೇತೃತ್ವ ಸಮಿತಿಯ ಪಠ್ಯಕ್ರಮ ಮುಂದುವರಿಸಲಿ. ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಬಸವಣ್ಣನ ತತ್ವ ಪಾಲಿಸಬೇಕು. ಇದು ಸರ್ಕಾರದ ಕರ್ತವ್ಯ ಎಂದು ಅವರು ಹೇಳಿದರು.
ನನಗೆ ಈಗ್ಲೂ ಬೆದರಿಕೆ ಪತ್ರ ಬರುತ್ತಿವೆ. ಇದೀಗ 16 ನೇ ಬೆದರಿಕೆ ಪತ್ರ ಬಂದಿದೆ. ಸನಾತನ ಮೌಲ್ಯ, ಹಿಂದುತ್ವ ವಿರೋಧಿಸಿದಾಗ ಈ ರೀತಿಯ ಪ್ರೇಮ ಪತ್ರಗಳು ಬರುತ್ತವೆ. ನಾನು ಇವುಗಳನ್ನು ಬೆದರಿಕೆ ಪತ್ರ ಅಂದುಕೊಂಡಿಲ್ಲ, ಪ್ರೇಮ ಪತ್ರ ಅಂದ್ಕೊಡಿದ್ದೀನಿ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಜಾರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೋದಿ ಸರ್ಕಾರ ಕಾರ್ಪೋರೇಟ್ ಕುಳಗಳಿಗೆ 10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಬಡವರಿಗೆ 10 ಕೆಜಿ ಅಕ್ಕಿ ಕೊಟ್ರೆ ಪ್ರಳಯವಾಗುತ್ತಾ? ರಾಜ್ಯದಲ್ಲಿ ಬಡವರಿಗೆ 50 ಸಾವಿರ ಕೋಟಿ ಅಷ್ಟೇ ಖರ್ಚಾಗುತ್ತೆ. ಇದು ದೊಡ್ಡದಲ್ಲ. ಬಡವರು, ಮಹಿಳೆಯರಿಗೆ ಕೊಡ್ತಿದ್ದಾರೆ. ಎಲ್ಲಾ ಲೇಖಕರು ಕೂಡಾ ಇದನ್ನು ಬೆಂಬಲಿಸಬೇಕು ಎಂದರು.

