
ವಿಮಾನದ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬಳಿಕ ದೆಹಲಿಯಿಂದ ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ರಷ್ಯಾದಲ್ಲಿ ಲ್ಯಾಂಡ್ ಮಾಡಲಾಗಿದ್ದು ಇದೀಗ ಅಲ್ಲಿ ಇಳಿದಿರುವ ಪ್ರಯಾಣಿಕರಿಗೆ ಯಾತನೆ ಶುರುವಾಗಿದೆ.
ನವದೆಹಲಿ: ವಿಮಾನದ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬಳಿಕ ದೆಹಲಿಯಿಂದ ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ರಷ್ಯಾದಲ್ಲಿ ಲ್ಯಾಂಡ್ ಮಾಡಲಾಗಿದ್ದು ಇದೀಗ ಅಲ್ಲಿ ಇಳಿದಿರುವ ಪ್ರಯಾಣಿಕರಿಗೆ ಯಾತನೆ ಶುರುವಾಗಿದೆ. ವಿಮಾನದಲ್ಲಿದ್ದ 216 ಪ್ರಯಾಣಿಕರಿಗೆ ರಷ್ಯಾದ ಮಗದನ್ನಲ್ಲಿ (Magadan, Russia) ಸರಿಯಾದ ವಸತಿ ವ್ಯವಸ್ಥೆ ಇಲ್ಲದಂತಾಗಿದೆ. ಬಸ್ನಲ್ಲಿ ಪ್ರಯಾಣಿಕರನ್ನು ವಿವಿಧ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಕೆಲವರನ್ನು ಶಾಲೆಗಳಲ್ಲಿ ಉಳಿಸಲಾಗಿದೆ. ಇಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೆ, ಭಾಷೆಯೂ ಬಾರದೆ, ತಮಗೆ ಬೇಕಾದ ಆಹಾರ ಸಿಗದೆ ಪ್ರಯಾಣಿಕರು ಒದ್ದಾಡುತ್ತಿದ್ದು, ಹಲವರು ನೆಲದ ಮೇಲೆಯೇ ಮಲಗಿಕೊಂಡಿದ್ದಾರೆ. ನಾವು 20 ಜನರಿದ್ದು, ಒಂದೇ ಜಮಖಾನೆ ನೀಡಲಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಈ ದೃಶ್ಯಗಳು ಕೂಡ ವೈರಲ್ ಆಗಿವೆ. ಪ್ರಯಾಣಿಕರಲ್ಲಿ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರು ಇದ್ದು ಭಾರೀ ಸಮಸ್ಯೆ ಉಂಟಾಗಿದೆ.

ಈ ಬಗ್ಗೆ ಮಾತನಾಡಿರುವ ವಿಮಾನ ಪ್ರಯಾಣಿಕ ಗಗನ್ ‘ನಮ್ಮ ಬ್ಯಾಗ್ಗಳು ಇನ್ನೂ ವಿಮಾನದಲ್ಲಿವೆ. ಇಲ್ಲಿ ಸಾಕಷ್ಟು ಮಾಂಸಾಹಾರವೇ ಲಭ್ಯವಿದ್ದು ಅನೇಕರು ಕೇವಲ ಬ್ರೆಡ್ ತಿನ್ನುತ್ತಿದ್ದಾರೆ. ವಯಸ್ಸಾದವರು ಔಷಧಿಗಳ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
