
ಬೆಂಗಳೂರು: ಪ್ರತಿಯೊಂದು ಮನೆಯವರೂ 200 ಯುನಿಟ್ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ಬಳಕೆ ಮಾಡಬಹುದು ಎಂದು ಯೋಚನೆಯಲ್ಲಿದ್ದ ಜನರು ಇದೀಗ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದೆ. ಹೌದು, ಗೃಹಜ್ಯೋತಿ ಯೋಜನೆಗೆ (Gruha Jyothi Scheme) ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊಸ ನಿಬಂಧನೆ ಹಾಕಿದ್ದು, ಯೋಜನೆಯ ಲಾಭ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಲು ಸೂಚನೆ ನೀಡಿದೆ

ಸರ್ಕಾರ ರಚನೆಯಾದ ನಂತರ ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ ಒಳಗೊಂಡ ಐದು ಗ್ಯಾರಂಟಿಗಳಿಗೆ ಒಂದೊಂದಾಗಿಯೇ ಷರತ್ತುಗಳನ್ನು ವಿಧಿಸುತ್ತಿದೆ. ಸದ್ಯ ಆನ್ಲೈನ್ ಅಥವಾ ಕಚೇರಿಗೆ ತೆರಳಿ ಕರೆಂಟ್ ಬಿಲ್ ಕಟ್ಟುವ ಸಮಯ ಉಳಿಯಿತಲ್ಲಾ ಎಂದು ಸಂತೋಷದಲ್ಲಿದ್ದ ಗ್ರಾಹಕರು, ಇದೀಗ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಸಬೇಕಾಗಿದೆ. ಅರ್ಜಿ ಸಲ್ಲಿಸಿದವರಿಗಷ್ಟೇ 200 ಯುನಿಟ್ ವರೆಗೆ ವಿದ್ಯುತ್ ಉಚಿತವಾಗಿ ಸಿಗಲಿದೆ.

ಜುಲೈ 1 ರಿಂದ ಗೃಹ ಜ್ಯೋತಿ ಜಾರಿಯಾಗಲಿದೆ. ಆರಂಭದಲ್ಲಿ ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದರೂ ಸರ್ಕಾರ ರಚನೆಯಾದ ನಂತರ ಗ್ರಾಹಕರು ಹಿಂದೆ ಬಳಕೆ ಮಾಡುತ್ತಿದ್ದ ವಿದ್ಯುತ್ ಪ್ರಮಾಣದ ಆಧಾರದ ಮೇಲೆ ವಿದ್ಯುತ್ ಉಚಿತ ಇರಲಿದೆ ಎಂದು ಷರತ್ತು ವಿಧಿಸಿತು. ಅಲ್ಲದೆ, 12 ತಿಂಗಳ ಸರಾಸರಿ ವಿದ್ಯುತ್ ಬಳಕೆಗೆ ಶೇ 10 ರಷ್ಟು ಹೆಚ್ಚುವರಿ ಯೂನಿಟ್ ಸೇರಿಸಿ ಯೋಜನೆಯ ಪ್ರಯೋಜನ ಒದಗಿಸಲಾಗವುದು ಎಂದು ಹೇಳಿದೆ. ಈ ರೀತಿ 200 ಯೂನಿಟ್‌ಗಳವರೆಗಿನ ಬಳಕೆಗೆ ಶುಲ್ಕದ ವಿನಾಯಿತಿ ನೀಡಲಾಗುತ್ತದೆ. ಜುಲೈವರೆಗೆ ಯಾವುದೇ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಪಾವತಿಸಬೇಕಿದೆ.
