
ಬೆಂಗಳೂರು: ಒಡಿಶಾದ ಬಾಲಾಸೋರ್ನಲ್ಲಿ (Odisha Train Accident) ಶುಕ್ರವಾರ(ಜೂನ್ 02) ಸಂಜೆ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ 288 ಜನರು ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಘನ ಘೋರ ದುರಂತಕ್ಕೆ ವಿಶ್ವದ ದೊಡ್ಡ ದೊಡ್ಡ ನಾಯಕರು ಮಮ್ಮಲ ಮರುಗಿದ್ದಾರೆ. ಭೀಕರ ಸರಣಿ ರೈಲು ಅಪಘಾತ ಘಟನೆಗೆ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ (Electronic Interlocking) ಪ್ರಕ್ರಿಯೆಯಲ್ಲಾದ ಲೋಪವೇ ಕಾರಣ ಎಂದು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಹೇಳಿದ್ದಾರೆ. ಅಲ್ಲದೇ ದುರಂತಕ್ಕೆ ಮಸೀದಿ(mosque) ಕಾರಣ ಎಂದು ತುಮಕೂರಿನ ಸುಮಲತಾ ಎಸ್ ಎನ್ನುವ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣ ವಾಗಿದೆ.. ಇನ್ನು ಪೋಸ್ಟ್ ಹಾಕಿರುವ ತುಮಕೂರಿನ ಮಹಿಳೆ ಯಾರೆಂದು ಒಡಿಶಾ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ತುಮಕೂರು ಮೂಲದ ಮಹಿಳೆಯೊಬ್ಬರು ಘಟನೆಗೆ ಮಸೀದಿ ಕಾರಣ ಎಂದು ಬಿಂಬಿಸುವ ಅರ್ಥದಲ್ಲಿ ಘಟನೆ ನಡೆದ ಸ್ಥಳದಲ್ಲಿ ಇರುವ ಒಂದು ಕಟ್ಟಡದ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿದ್ದು, ಇದು ಒಡಿಶಾ ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಒಡಿಶಾ ಪೊಲೀಸರು, ಮಸೀದಿ ಫೋಟೋ ಹರಿಬಿಟ್ಟ ಮಹಿಳೆ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಕರ್ನಾಟಕ ಪೊಲೀಸರಿಂದ ಮಹಿಳೆಯ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಸುಳ್ಳು ಸುದ್ದಿ ಬಗ್ಗೆ ಒಡಿಶಾ ಪೊಲೀಸರು ಟ್ವಿಟ್ಟರ್ ಮೂಲಕ ಎಚ್ಚರಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ರೈಲು ದುರಂತದ ಬಗ್ಗೆ ಕೇಂದ್ರ ರೈಲ್ವೆ ಇಲಾಖೆ ತನಿಖೆ ನಡೆಸುತ್ತಿದೆ. ಯಾರು ಕೊಡ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಬಾರದು . ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಪೋಸ್ಟ್ ಮಾಡಿರುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
