
ಬೆಂಗಳೂರು: ಕರ್ನಾಟಕದಲ್ಲಿ ತಿಂಗಳಿಗೆ 200 ಯೂನಿಟ್‌ವರೆಗೆ ವಿದ್ಯುತ್ ಅನ್ನು (Electricity Bill) ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದ್ದಾರೆ. ಸಚಿವ ಸಂಪುಟ ಸಭೆಯ ನಂತರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಜುಲೈ 1 ರಿಂದ ಗೃಹ ಜ್ಯೋತಿ (Gruha Jyothi scheme) ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. 12 ತಿಂಗಳ ಸರಾಸರಿ ವಿದ್ಯುತ್ ಬಳಕೆಗೆ ಶೇ 10 ರಷ್ಟು ಹೆಚ್ಚುವರಿ ಯೂನಿಟ್ ಸೇರಿಸಿ ಯೋಜನೆಯ ಪ್ರಯೋಜನ ಒದಗಿಸಲಾಗವುದು. ಈ ರೀತಿ 200 ಯೂನಿಟ್‌ಗಳವರೆಗಿನ ಬಳಕೆಗೆ ಶುಲ್ಕದ ವಿನಾಯಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ

ಜುಲೈ ತಿಂಗಳ ವಿದ್ಯುತ್ ಬಿಲ್ನಿಂದಲೇ ವಿನಾಯಿತಿ ಪ್ರಾರಂಭವಾಗುತ್ತದೆ. ಜುಲೈನಿಂದ ಬಳಕೆಯು ಉಚಿತವಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಜುಲೈವರೆಗೆ ಯಾವುದೇ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಪಾವತಿಸಬೇಕು ಎಂದು ಅವರು ಹೇಳಿದ್ದಾರೆ.
ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ವಿಧಾನಸಭೆ ಚುನಾವಣೆಯ ಮೊದಲು ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾಗಿದೆ.
ಉಚಿತ ವಿದ್ಯುತ್ ಯೋಜನೆ; ಬಿಲ್ ಲೆಕ್ಕಾಚಾರ ಹೇಗೆ?
ವಾರ್ಷಿಕ ಸರಾಸರಿ ಬಳಕೆಯು 100 ಯೂನಿಟ್ ಇದೆ ಎಂದಿಟ್ಟುಕೊಳ್ಳೋಣ (ಮಾಸಿಕ ವಿದ್ಯುತ್ ಬಳಕೆಯನ್ನು ಒಟ್ಟು ಲೆಕ್ಕ ಹಾಕಿ 12 ರಿಂದ ಭಾಗಿಸುವ ಮೂಲಕ ಇದನ್ನು ಪಡೆಯಲಾಗಿದೆ). ಮುಖ್ಯಮಂತ್ರಿಗಳು ಹೇಳಿದ ಪ್ರಕಾರ, ಒಟ್ಟು ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ ಶೇ 10 ರಷ್ಟನ್ನು ಒದಗಿಸಲಾಗುತ್ತದೆ. ಇದರೊಂದಿಗೆ, ಶೇ 110 ಯೂನಿಟ್ ವರೆಗೆ ವಿದ್ಯುತ್ ಬಳಸಿದರೆ ಬಿಲ್ ಪಾವತಿಸಬೇಕಿಲ್ಲ. ಜುಲೈ ತಿಂಗಳಿನಿಂದ, ಈ 110 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿರುತ್ತವೆ. ಉದಾಹರಣೆಗೆ, ಜುಲೈನಲ್ಲಿ, ವಿದ್ಯುತ್ ಬಳಕೆಯು 200 ಯೂನಿಟ್‌ಗಳಾಗಿದ್ದರೆ, ಈ ಪೈಕಿ 110 ಯೂನಿಟ್ ಉಚಿತವಾಗಿರುತ್ತದೆ ಮತ್ತು ಉಳಿದ 90 ಯೂನಿಟ್‌ಗಳಿಗೆ ನೀವು ಪಾವತಿಸಬೇಕಾಗುತ್ತದೆ.

ವಾರ್ಷಿಕ ಸರಾಸರಿ ಬಳಕೆ 200 ಯೂನಿಟ್‌ಗಳ ವರೆಗೆ ಇರುವ ಯಾರಿಗೇ ಆದರೂ, ಜುಲೈನಿಂದ ಆ ಮಿತಿಯವರೆಗಿನ ಅವರ ವಿದ್ಯುತ್ ಬಳಕೆ ಉಚಿತವಾಗಿರುತ್ತದೆ. ಆದರೆ, ಒಂದು ತಿಂಗಳ ಸರಾಸರಿ ಬಳಕೆ 200 ಯೂನಿಟ್‌ಗಿಂತ ಹೆಚ್ಚಿದ್ದರೆ ಸಂಪೂರ್ಣ ಬಿಲ್ ಪಾವತಿಸಬೇಕೇ ಅಥವಾ 200 ಯೂನಿಟ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆಯೇ? ಉಳಿದ ಬಿಲ್ ಮಾತ್ರ ಪಾವತಿಸಬೇಕೇ ಎಂಬುದನ್ನು ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ.