
ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಎಕ್ಸ್‌ಪ್ರೆಸ್ ರೈಲು ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ.
ಭುವನೇಶ್ವರ: ಒಡಿಶಾದ ಬಾಲಸೋರ್ (Balasore) ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ(Odisha Train Accident) ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. 900ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಹಿನ್ನೆಲೆ ಒಡಿಶಾ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದೆ. ರಾಜ್ಯದಲ್ಲಿ ಇಂದು (ಜೂ.03) ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ. ಇನ್ನು ಘಟನಾ ಸ್ಥಳಕ್ಕೆ ಇಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭೇಟಿ ನೀಡಲಿದ್ದಾರೆ.

ಒಡಿಶಾದ ಬಾಲಸೋರ್ನಲ್ಲಿ ರೈಲು ಅಪಘಾತ
ಬಹನಾಗಾ ರೈಲು ನಿಲ್ದಾಣದ ಬಳಿ 3 ರೈಲು ಮಾರ್ಗಗಳಿದ್ದವು, ಕೋಲ್ಕತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಮೇನ್ ಲೈವ್ನಲ್ಲಿ ನಿನ್ನೆ (ಜೂ.02) ಸಂಜೆ 7.30ಕ್ಕೆ ಹೊರಟಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್, (ರೈಲು ಸಂಖ್ಯೆ 12841) ಒಡಿಶಾದ ಬಹನಗಾ ಬಜಾರ್‌ನಲ್ಲಿರುವ ರೈಲು ನಿಲ್ದಾಣದ ಬಳಿ ಹಳಿ ತಪ್ಪಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಮೊದಲು ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಕೋರಮಂಡಲ್ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿ ತಪ್ಪಿ ಮೂರನೇ ರೈಲು ಮಾರ್ಗದ ಮೇಲೂ ಬಿದ್ದಿವೆ.
ಕೆಲ ಸಮಯದ ಬಳಿಕ ಇದೇ ಮಾರ್ಗವಾಗಿ ಇನ್ನೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಆಗಮಿಸಿದ ಬೆಂಗಳೂರು-ಹೌರಾ ಎಕ್ಸಪ್ರೆಸ್ (ರೈಲು ಸಂಖ್ಯೆ 12864) ಸಹ ಹಳಿತಪ್ಪಿದ್ದ ಕೋರಮಂಡಲ್ನ ಬೋಗಿಗಳಿಗೆ ಡಿಕ್ಕಿ ಹೊಡೆದಿದ್ದು, ನಾಲ್ಕು ಬೋಗಿಗಳಿಗೆ ಹಳಿತಪ್ಪಿವೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ. ರೈಲು ಅಪಘಾತದಲ್ಲಿ ಮರತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಖುದ್ದು ಮಾಹಿತಿ ಪಡೆಯುತ್ತಿದ್ದೇವೆ ಎಂದು ಉಭಯ ನಾಯಕರು ಟ್ವೀಟ್ ಮಾಡಿದ್ದರು.
