
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಹಿಜಾಬ್ ನಿಷೇಧ (Hijab Ban) ಸೇರಿದಂತೆ ಎಲ್ಲಾ ಕಾನೂನು ಮತ್ತು ಆದೇಶಗಳನ್ನು ಕಾಂಗ್ರೆಸ್ ಸರ್ಕಾರ ಪರಿಶೀಲಿಸಲಿದೆ ಎಂದು ಸಚಿವ(Priyank Kharge) ಬುಧವಾರ ಹೇಳಿದ್ದಾರೆ. ನಾಗ್ಪುರದಲ್ಲಿ ಕುಳಿತುಕೊಂಡಿರುವ ಜನರ ಆದೇಶದ ಮೇರೆಗೆ ರೂಪಿಸಲಾಗಿರುವ ಎಲ್ಲಾ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಅವರು ಹೇಳಿದರು. ನಮ್ಮ ವರ್ಚಸ್ಸು ಮತ್ತು ರಾಜ್ಯದ ಆರ್ಥಿಕ ಭವಿಷ್ಯಕ್ಕೆ ಧಕ್ಕೆ ತರುವ ಮಸೂದೆಗಳನ್ನು ನಾವು ಹಿಂಪಡೆಯುತ್ತೇವೆ. ನಾವು ಸಂವಿಧಾನದ ವ್ಯಾಪ್ತಿಯಲ್ಲಿರುವ ಎಲ್ಲಾ ಕಾನೂನುಗಳನ್ನು ಪರಿಶೀಲಿಸುತ್ತೇವೆ ಮತ್ತು ಅಗತ್ಯವಿಲ್ಲದ ಕಾನೂನುಗಳನ್ನು ಹಿಂಪಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.

ಹಿಜಾಬ್ ಸೇರಿದಂತೆ ಸರ್ಕಾರದ ಆದೇಶಗಳನ್ನು ನಾವು ಮರುಪರಿಶೀಲಿಸುತ್ತೇವೆ ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಾಗ್ಪುರದಲ್ಲಿ ಕುಳಿತಿರುವ ಜನರ ಆದೇಶದ ಮೇರೆಗೆ ಪರಿಚಯಿಸಲಾದ ಯಾವುದೇ ಮಸೂದೆಗಳು ಅಥವಾ ಕಾನೂನುಗಳು ನಮಗೆ ಬೇಡ. ಬಿಜೆಪಿ ಆಡಳಿತದಲ್ಲಿ ಪಠ್ಯಪುಸ್ತಕಗಳಲ್ಲಿ ಮಾಡಿರುವ ಬದಲಾವಣೆಗಳನ್ನೂ ಪರಿಶೀಲಿಸುತ್ತೇವೆ. ಅವರು ಇತಿಹಾಸವನ್ನು ತಿರುಚಿದ್ದಾರೆ, ನಾವು ಅದನ್ನು ಸರಿಪಡಿಸುತ್ತೇವೆ ಎಂದು ಖರ್ಗೆ ಹೇಳಿದರು.

ಗೋಹತ್ಯೆ ನಿಷೇಧ ಕಾನೂನು, ಮತಾಂತರ ತಡೆ ಕಾನೂನು ಮತ್ತು ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶವನ್ನು ಹಿಂಪಡೆಯಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಅವರಿಂದ ಈ ಹೇಳಿಕೆ ಮೂಡಿಬಂದಿದೆ.
ಈ ಮಧ್ಯೆ, ಹಿಜಾಬ್ ನಿಷೇಧ ಹಿಂಪಡೆಯಬೇಕು ಎಂಬ ಆಮ್ನೆಸ್ಟಿ ಇಂಡಿಯಾದ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ಜಿ ಪರಮೇಶ್ವರ ಅವರು ‘ಐದು ಭರವಸೆಗಳನ್ನು ಈಡೇರಿಸಿದ ನಂತರ ನಾವು ಅದನ್ನು ಪರಿಗಣಿಸುತ್ತೇವೆ’ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಿದ್ಧಪಡಿಸಲಾಗಿರುವ ಪಠ್ಯ ಪುಸ್ತಕದ ಮರು ಪರಿಷ್ಕರಣೆ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಿಳಿಸಿದ್ದರು. ಇದೀಗ ಇತರ ಕಾನೂನುಗಳಿಗೆ ಸಂಬಂಧಿಸಿ ಸಚಿವರಿಬ್ಬರು ಹೇಳಿಕೆ ನೀಡಿರುವುದು ಕುತೂಹಲ ಹೆಚ್ಚಿಸಿದೆ.
ವಿಧಾನಸೌಧದಲ್ಲಿ ಹಿರಿಯ ಐಎಎಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ್ದ ಅವರು, ಪಠ್ಯ ಪುಸ್ತಕ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲೇ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದರು. ಬಿಜೆಪಿ ಆಡಳಿತದ ಅವಧಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದು ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು