
ಮಂಗಳೂರು: ಭಜರಂಗದಳ (Bajrang Dal) ಮತ್ತು ಬಿಜೆಪಿ (BJP) ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಮಾಣಿ ಎಂಬಲ್ಲಿ ಬುಧವಾರ ನಡೆದಿದೆ. ದಾಳಿ ನಡೆಸಿದವರು ಕಾಂಗ್ರೆಸ್ (Congress) ಕಾರ್ಯಕರ್ತರು ಎಂಬ ಆರೋಪ ಕೇಳಿಬಂದಿದೆ. ಚುನಾವಣಾ ಫಲಿತಾಂಶದ ದಿನದ ಸಂಭ್ರಮಾಚರಣೆ ವೇಳೆ ನಡೆದಿದ್ದ ಗಲಾಟೆಗೆ ಪ್ರತೀಕಾರ ಈ ದಾಳಿ ನಡೆದಿರುವ ಶಂಕೆ ಇದೆ ಎಂದು ಹೇಳಲಾಗುತ್ತಿದೆ. ಪೆರಾಜೆ ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.




ಮಾಣಿ ಜಂಕ್ಷನ್ ಬಳಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಯುವಕರ ಮೇಲೆ ತಂಡವೊಂದು ದಾಳಿ ನಡೆಸಿದೆ. ಓಮ್ನಿ ಕಾರಿನಲ್ಲಿ ಬಂದ ತಂಡ ಸ್ಕೂಟರ್ಗೆ ಡಿಕ್ಕಿ ಹೊಡೆಸಿ ನಂತರ ತಲವಾರಿನಿಂದ ಹಲ್ಲೆ ನಡೆಸಿದೆ. ಮಹೇಂದ್ರ ಹಾಗೂ ಪ್ರಶಾಂತ್ ನಾಯ್ಕ್ ಅವರ ಕಾಲು ಮತ್ತು ತಲೆಯ ಭಾಗಕ್ಕೆ ಗಾಯವಾಗಿದೆ. ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನಿವಾಸಿ ರಾಕೇಶ್, ಮಾಣಿ ಮಂಜುನಾಥ್ ಯಾನೆ ಮಂಜು ಹಾಗೂ ಪ್ರವೀಣ್ ನಾಯ್ಕ್ ಯಾನೆ ಮಹಾಲಿಂಗ ಮತ್ತಿತರ ತಂಡ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳಕ್ಕೆ ವಿಟ್ಲ ಪೋಲೀಸರ ತಂಡ ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದೆ.