
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸಂಜೆ ವೇಳೆ ಸುರಿದ ಭಾರಿ ಮಳೆಗೆ ಒಬ್ಬ ಮಹಿಳೆ ಬಲಿಯಾಗಿರುವ ದುರ್ಘಟನೆ ನಡೆದಿದೆ. ನಗರದ ಹೃದಯ ಭಾಗದಲ್ಲಿರುವ ಕೆ.ಆರ್. ವೃತ್ತದ ಬಳಿಯಿರುವ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಕಾರು ಸಿಲುಕಿಕೊಂಡು ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯುವತಿಯನ್ನು ಭಾನುರೇಖಾ (22) ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಇನ್ಫೋಸಿಸ್ನ ಉದ್ಯೋಗಿಯಾಗಿದ್ದಳು. ಶಾಲೆ, ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿದ್ದ ಕುಟುಂಬಕ್ಕೆ ಬೆಂಗಳೂರು ತೋರಿಸಲು ಕರೆಯಿಸಿಕೊಂಡಿದ್ದಳು. ಆದ್ರೆ, ಬೆಂಗಳೂರಿನ ಮಹಾಮಳೆಗೆ ಭಾನುರೇಖಾ ದುರಂತ ಅಂತ್ಯಕಂಡಿದ್ದಾಳೆ.

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಯುವತಿ ಬಲಿ
ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಮುಳುಗಿದ ಕಾರನಲ್ಲಿ ಸಿಲುಕಿದ್ದ ಕುಟುಂಬವನ್ನು ರಕ್ಷಣೆ ಮಾಡುವಷ್ಟರಲ್ಲಿ ಯುವತಿ ಹಾಗೂ ವೃದ್ಧೆ ಇಬ್ಬರೂ ನೀರು ಕುಡಿದು ಅಸ್ವಸ್ಥರಾಗದ್ದರು. ಅವರನ್ನು ಕೂಡಲೇ ಹತ್ತಿರದಲ್ಲೇ ಇದ್ದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಆಸ್ಪತ್ರೆ ಸಿಬ್ಬಂದಿ ಯುವತಿ ಸ್ಥಿತಿ ಗಂಭೀರವಾಗಿದ್ದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳುವಲ್ಲಿ ನಿರಾಕರಿಸಿದ್ದಾರೆ. ನಂತರ, ಪತ್ರಕರ್ತರು ತರಾಟೆಗೆ ತೆಗೆದುಕೊಂಡ ಬಳಿ ಮಹಿಳೆಯನ್ನು ಆಸ್ಪತ್ರೆಯೊಳಗೆ ಸೇರಿಸಿಕೊಂಡಿದ್ದಾರೆ. ಆದರೂ ಆಸ್ಪತ್ರೆಯೊಳಗೆ ಇದ್ದ ವೈದ್ಯರು ಚಿಕಿತ್ಸೆ ನೀಡಲು ನಿರಾಕರಣೆ ಮಾಡಿ ಸತಾಯಿಸಿದ್ದಾರೆ. ಈ ಪ್ರಕರಣ ಗಂಭೀರವಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯರಿಗೆ ಸೂಚನೆ ನೀಡಿದ ನಂತರ ಯುವತಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಿ ಯುವತಿಯ ಪ್ರಾಣನಿಂತು ಹೋಗಿದೆ

ಮೃತ ಮಹಿಳೆಗೆ 5 ಲಕ್ಷ ರೂ ಪರಿಹಾರ
ಇನ್ನು ಘಟನಾ ಸ್ಥಳಕ್ಕೆ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಪರಿಶೀಲಿಸಿದರು. ಬಳಿಕ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ,
ಅಸ್ವಸ್ಥಗೊಂಡಿದ್ದ ಯುವತಿ ಭಾನು ಮೃತಪಟ್ಟಿದ್ದಾರೆ. ವಿಜಯವಾಡದವರು ಬೆಂಗಳೂರು ನೋಡಲು ಬಂದಿದ್ದರು. ದಿಢೀರ್ ಮಳೆ ಬಂದಿದ್ದರಿಂದ ನೀರು ತುಂಬಿ ದುರಂತ ಸಂಭವಿಸಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ವಿಚಾರಣೆ ನಡೆಸಲಾಗುವುದು. ನಾವು ನಿರ್ಲಕ್ಷ್ಯ ಮಾಡಿಲ್ಲವೆಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ. ತನಿಖೆ ಬಳಿಕ ತಪ್ಪು ಮಾಡಿದ್ದರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು. ಇನ್ನು ಮೃತ ಕುಟುಂಬಕ್ಕೆ ಸರ್ಕಾರದ ವತಿಯಿಂದ 5 ಲಕ್ಷ ರೂ. ಹಾಗೂ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ತಿಳಿಸಿದರು
