
ಬೆಂಗಳೂರು: ಕರ್ನಾಟಕದ ನೂತನ ಅಡ್ವೊಕೇಟ್ ಜನರಲ್ (Karnataka Advocate General) ಆಗಿ ಹೈಕೋರ್ಟ್ (Karnataka High Court) ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ (Shashikiran Shetty) ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿವೃತ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರ ಪುತ್ರನೂ ಆಗಿರುವ ಶಶಿಕಿರಣ್ ಶೆಟ್ಟಿ ಅವರು ಶಾಸಕರ ಅನರ್ಹತೆ ಸೇರಿ ಹಲವು ಮಹತ್ವದ ಪ್ರಕರಣಗಳನ್ನು ನಿರ್ವಹಿಸಿದ್ದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮುಕ್ತಾಯದ ನಂತರ ಅಡ್ವೊಕೇಟ್ ಜನರಲ್ ಆಗಿದ್ದ ಪ್ರಭುಲಿಂಗ ನಾವದಗಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿದ್ದ ಎಜಿ ಸ್ಥಾನಕ್ಕೆ ಇದೀಗ ಶಶಿಕಿರಣ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಎಜಿ ನೇಮಕ ಸಂಬಂಧ ಸಂಪುಟ ಸಭೆಯು ಇಂದು ಮುಖ್ಯಮಂತ್ರಿ ಅವರಿಗೆ ಅಧಿಕಾರ ನೀಡಿತ್ತು. ಈ ಬಗ್ಗೆ ಮಾತನಾಡಿದ ಶಶಿಕಿರಣ್, ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ

ನ್ಯಾಯಾಲಯದ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುವುದು, ಇದಕ್ಕಾಗಿ ಮೂಲಸೌಕರ್ಯಗಳನ್ನು ಸುಧಾರಿಸುವುದು ನಮ್ಮ ಆದ್ಯತೆಯಾಗಿದೆ. ಇದರ ಜೊತೆಗೆ ಕ್ಷುಲ್ಲಕ ಪ್ರಕರಣಗಳು, ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸುವುದು, ಕಾನೂನು ಇಲಾಖೆಯನ್ನು ಬಲಪಡಿಸುವುದು ಕೂಡ ನಮ್ಮ ಆದ್ಯತೆಯಾಗಿದೆ ಎಂದು ಶಶಿಕಿರಣ್ ಶೆಟ್ಟಿ ಹೇಳಿದ್ದಾರೆ.

ಇದಕ್ಕೂ ಮುನ್ನ ರಾಜ್ಯ ಸರ್ಕಾರವು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಮೋಹನ್ ಅವರನ್ನು ನೇಮಕಗೊಳಿಸಿದೆ. ಈ ಹಿಂದೆ ಡಿಜಿ ಐಜಿಪಿ ಆಗಿದ್ದ ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕಮಾಡಲಾಗಿದೆ
