
ಈ ಬಿಕ್ಕಟ್ಟಿನಿಂದ ಬಿಜೆಪಿಗರು, ಸಂಘ ಪರಿವಾರಕ್ಕೆ ಇಕ್ಕಟ್ಟು, ಪುತ್ತೂರಿನಲ್ಲಿ ಪುತ್ತಿಲ ಬಂಡಾಯದಿಂದ ಹೊತ್ತಿಕೊಂಡ ಕಿಡಿ, ಈಗ ಈ ಬಿಕ್ಕಟ್ಟು ಸೋಷಿಯಲ್ ಮೀಡಿಯಾದಲ್ಲಿ ಧಗಧಗ, ಇದನ್ನು ಈಗಲೇ ಶಮನ ಮಾಡದಿದ್ದರೆ ಪಕ್ಷಕ್ಕೆ ಕುತ್ತು: ಆತಂಕ
ಮಂಗಳೂರು(ಮೇ.16): ವಿಧಾನಸಭಾ ಚುನಾವಣೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವ ವರ್ಸಸ್ ಬಿಜೆಪಿ ಎಂಬ ವಾತಾವರಣ ನಿರ್ಮಾಣವಾಗುತ್ತಿರುವುದು ಪಕ್ಷದ ನಾಯಕರು ಹಾಗೂ ಸಂಘ ಪರಿವಾರ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸತೊಡಗಿದೆ.

ಪುತ್ತೂರಿನಿಂದ ಆರಂಭವಾದ ಈ ಬಿಕ್ಕಟ್ಟು ಸಾಮಾಜಿಕ ಜಾಲತಾಣದ ಮೂಲಕ ತೀವ್ರಗೊಂಡಿದ್ದು, ಈಗಲೇ ಶಮನಗೊಳ್ಳದಿದ್ದರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಿಸಬಹುದು ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ.
ದ.ಕ. ಜಿಲ್ಲೆಯ ಪುತ್ತೂರಲ್ಲಿ ಬಿಜೆಪಿ ನಾಯಕತ್ವದ ವಿರುದ್ಧವೇ ತೊಡೆತಟ್ಟಿ ಪಕ್ಷೇತರನಾಗಿ ಸ್ಪರ್ಧಿಸಿದ ಅರುಣ್ ಕುಮಾರ್ ಪುತ್ತಿಲ ಅವರು ದಾಖಲೆ ಮತಗಳನ್ನು ಪಡೆದಿರುವುದು ಬಿಜೆಪಿ ಹಾಗೂ ಸಂಘ ಪರಿವಾರವನ್ನು ಕಂಗೆಡುವಂತೆ ಮಾಡಿದೆ. ಬಿಜೆಪಿ ಹಾಗೂ ಸಂಘ ಪರಿವಾರ ಪುತ್ತೂರಲ್ಲಿ ಇಡೀ ಶಕ್ತಿ ಹಾಕಿ ಪ್ರಚಾರ ಕಾರ್ಯ ನಡೆಸಿದರೂ ಪುತ್ತಿಲ ಅವರನ್ನು ಮತ ಸೆಳೆಯದಂತೆ ಕಟ್ಟಿ ಹಾಕಲು ಸಾಧ್ಯವಾಗಿಲ್ಲ. ಇದನ್ನು ಹೀಗೆಯೇ ಮುಂದುವರಿಯಲು ಬಿಟ್ಟರೆ ಭವಿಷ್ಯದಲ್ಲಿ ಸಂಘಟನೆ ಹಾಗೂ ಪಕ್ಷದ ಅಸ್ತಿತ್ವಕ್ಕೆ ಬಲವಾದ ಏಟು ಬೀಳಬಹುದು. ಮಂಬರುವ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ಲೋಕಸಭಾ ಚುನಾವಣೆಗೆ ಇದುವೇ ಬಿಜೆಪಿ ಗೆಲವಿಗೆ ತೊಡಕಾಗಬಹುದು ಎಂಬ ಚಿಂತೆ ಪಕ್ಷದ ನಾಯಕರನ್ನು ಆವರಿಸಿಕೊಂಡಿದೆ.

