

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಪ್ರತಿ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಸಾಕಷ್ಟು ಕಸರತ್ತು ಮಾಡುತ್ತಿವೆ. 18 ವರ್ಷ ವಯಸ್ಸು ಪೂರೈಸಿದವರು ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಮತದಾನಕ್ಕೆ ಅರ್ಹರಾಗಿದ್ದಾರೆ. ಮೇ 10ರಂದು ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಆದರೆ ಈಗ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬ ಸಂಶಯ ಹಲವರನ್ನು ಕಾಡುತ್ತಿರಬಹುದು. ಹಾಗಾದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಮುಂದೆ ಓದಿ.
ಮತದಾರರ ಪಟ್ಟಿಯು ಒಂದು ನಿರ್ದಿಷ್ಟ ಕ್ಷೇತ್ರದ ಮತದಾರರ ಹೆಸರು ಮತ್ತು ಇತರ ವಿವರಗಳನ್ನು ಒಳಗೊಂಡಿರುವ ಸಮಗ್ರ ಪಟ್ಟಿಯಾಗಿದೆ. ಭಾರತದ ಚುನಾವಣಾ ಆಯೋಗವು ನಿಯಮಿತವಾಗಿ ನವೀಕರಿಸಿದ ಮತದಾರರ ಪಟ್ಟಿಯನ್ನು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸುತ್ತದೆ.
ಹೆಸರು ಪರಿಶೀಲಿಸುವ ವಿಧಾನ
ವೆಬ್ ಸೈಟ್ಗೆ ಭೇಟಿ ನೀಡಿದ ನಂತರ, ನೀವು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಎರಡು ವಿಧಾನಗಳಲ್ಲಿ ಹುಡುಕಬಹುದಾಗಿದೆ. ಮೊದಲ ವಿಧಾನವೆಂದರೆ ಸಾಮಾನ್ಯ ವಿಧಾನ. ಇನ್ನೊಂದು ಎಪಿಕ್ ಸಂಖ್ಯೆ ವಿಧಾನ.
ಸಾಮಾನ್ಯ ವಿಧಾನ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಪತ್ತೆ ಹಚ್ಚಲು ಈ ಸಾಮಾನ್ಯ ವಿಧಾನವನ್ನು ಬಳಸಬಹುದಾಗಿದೆ. http://electoralsearch.in ಸೈಟ್ ಭೇಟಿ ನೀಡಿ ಸರ್ಚ್ ಬೈ ಡೀಟೇಲ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ನಿಮ್ಮ ಹೆಸರು, ವಯಸ್ಸು, ರಾಜ್ಯ, ಜಿಲ್ಲೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಪರದೆಯ ಕೆಳಭಾಗದಲ್ಲಿ ಮಾಹಿತಿ ನೀಡಲಾಗುತ್ತದೆ.
ಎಪಿಕ್ ಸಂಖ್ಯೆ ವಿಧಾನ: ನೀವು ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಅದರ ಸಂಖ್ಯೆ ಬಳಸುವುದರ ಮೂಲಕ ಪರಿಶೀಲಿಸಬಹುದು. ಎಪಿಕ್ ಅಂದರೆ ಅಕ್ಷರ ಮತ್ತು ಸಂಖ್ಯೆಗಳಿಂದ ಕೂಡಿದ ಕೋಡ್ ಆಗಿದೆ. http://electoralsearch.in ಸೈಟ್ಗೆ ಭೇಟಿ ನೀಡಿ, ಸರ್ಚ್ ಬೈ ಎಪಿಕ್ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಗುರುತಿನ ಚೀಟಿಯ ಸಂಖ್ಯೆ, ರಾಜ್ಯ, ಕ್ಯಾಪ್ಚಾ ಕೋಡ್ನ್ನು ನಮೂದಿಸಿ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಪರದೆಯ ಕೆಳಭಾಗದಲ್ಲಿ ಜಿಲ್ಲೆ, ವಿಧಾನಸಭಾ ಕ್ಷೇತ್ರ ವಿವರ ಮೂಡುತ್ತದೆ.


