

ಮಂಗಳೂರು: ನೈತಿಕ ಪೊಲೀಸ್‌ಗಿರಿ ಶಂಕೆ ಹಿನ್ನೆಲೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಭಜರಂಗಿ ಗಳನ್ನು ಬಂಧಿಸಲಾಗಿದೆ. ದಿನೇಶ್ ಗೌಡ (25) ಪ್ರಜ್ವಲ್ (23) ನಿಶಾಂತ್ ಕುಮಾರ್ (19) ಮತ್ತು ಪ್ರದೀಪ್ (19) ಬಂಧಿತ ಆರೋಪಿಗಳಾಗಿದ್ದು, ಪುತ್ತೂರಿನವರು ಎಂದು ಕರ್ನಾಟಕ ಪೊಲೀಸ್ ಮೂಲಗಳು ನ್ಯೂಸ್ 9ಗೆ ತಿಳಿಸಿವೆ. ಪುತ್ತೂರು ತಾಲೂಕಿನಲ್ಲಿ ಮಂಗಳವಾರ ಮೇ 2ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಹಿಂದೂ ಯುವತಿಯೊಂದಿಗೆ ಮಾತನಾಡಿದ ಮುಸ್ಲಿಂ ಯುವಕನಿಗೆ ಹಿಗ್ಗಾಮುಗ್ಗವಾಗಿ ಥಳಿಸಿದ್ದರು. ಮಹಮ್ಮದ್ ಫಾರಿಶ್ (18) ಥಳಿತಕ್ಕೊಳಗಾದ ಯುವಕ.
ಯುವಕನಿಗೆ ಹಿಗ್ಗಾಮುಗ್ಗ ಥಳಿತ
ಆರೋಪಿ ದಿನೇಶ್ ಗೌಡ ನಗರದಲ್ಲಿ ಆಟೋರಿಕ್ಷಾ ನಡೆಸುತ್ತಿದ್ದರೆ, ಉಳಿದವರು ಕಾಲೇಜು ವಿದ್ಯಾರ್ಥಿಗಳು ಎಂದು ಮೂಲಗಳು ತಿಳಿಸಿವೆ. ಪುತ್ತೂರಿನ ಮರೀಲ್ ಕಾಡುಮನೆ ನಿವಾಸಿ ಕೆ.ಇಬ್ರಾಹಿಂ ಅವರ ದ್ವಿತೀಯ ಪುತ್ರನಾಗಿರುವ ಮಹಮ್ಮದ್ ಫಾರಿಶ್, ಹಿಂದೂ ಯುವತಿಯೊಂದಿಗೆ ಮಾತನಾಡುತ್ತಿದ್ದ. ಈ ವೇಳೆ ಸ್ಥಳೀಯ ಗುಂಪೊಂದು ಮಹಮ್ಮದ್ ಫಾರಿಶ್ನನ್ನು ಪ್ರಶ್ನಿಸಿ ಹಿಗ್ಗಾಮುಗ್ಗವಾಗಿ ಥಳಿಸಿದ್ದರು. ಸದ್ಯ ವಿದ್ಯಾರ್ಥಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು ಮಹಮ್ಮದ್ ಫಾರಿಶ್ನಿಂದ ಮಾಹಿತಿ ಕಲೆಹಾಕಿದ್ದಾರೆ.

ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸರು ತನಿಖೆ ಆರಂಭಿಸಿ ಬುಧವಾರ ಬೆಳಿಗ್ಗೆ ನಾಲ್ವರನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ), 147 (ಗಲಭೆ), 148 (ಮಾರಕಾಸ್ತ್ರದೊಂದಿಗೆ ಗಲಭೆ), 365 (ಅಪಹರಣ), 504 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ), 324 (ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
