

ಬಂಟ್ವಾಳ : ಬಿಜೆಪಿ ಸರಕಾರ ಕೇವಲ ಪ್ರಚಾರಕ್ಕೆ ಸೀಮಿತವಾಗಿತ್ತು, ಅಭಿವೃದ್ಧಿಗೆ ಪೂರಕವಾಗಿರಲಿಲ್ಲ ಎಂದು ಕಾಂಗ್ರೆಸ್ , ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ಬೆಂಜನಪದವು ಮತ್ತು ಕಲಾಯಿ ಜಂಕ್ಷನ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.
ವಸತಿ ಧಮಾಕಾ, ಕ್ಷೇತ್ರಕ್ಕೆ 5,000 ಮನೆ, 10,000 ಮನೆ ಎಂದು ಪತ್ರಿಕೆಗಳಲ್ಲಿ ಬರುತಿತ್ತು. ಆದರೆ, ಇಲ್ಲಿ ನೋಡಿದರೆ ಯಾರಿಗೂ ಮನೆ ಸಿಕ್ಕಿದ್ದು ಕಂಡುಬಂದಿಲ್ಲ. ಹೀಗೆ ಪ್ರತಿಯೊಂದು ಯೋಜನೆಗಳ ಬಗ್ಗೆ ಪತ್ರಿಕೆ, ಟಿವಿಗಳಲ್ಲಿ ಬರುತ್ತದೆ. ಆದರೆ ವಾಸ್ತವದಲ್ಲಿ ಯೋಜನೆಗಳು ಜನತೆಗೆ ತಲುಪಿಲ್ಲ ಎಂದು ಅವರು ತಿಳಿಸಿದರು.
ನನ್ನ ಅವಧಿಯಲ್ಲಿ 20,000 ಮಂದಿಗೆ ಹಕ್ಕುಪತ್ರ ನೀಡಿದ್ದೆ. ಎಷ್ಟು ಜನ ನೆನಪಿಟ್ಟಿದ್ದಾರೆ ಗೊತ್ತಿಲ್ಲ. ಆದರೆ ಪ್ರಾಮಾಣಿಕವಾಗಿ ಜನಸೇವೆ ಮಾಡಿದ ಬಗ್ಗೆ ತೃಪ್ತಿಯಿದೆ ಎಂದು ಅವರು ಹೇಳಿದರು.
ಕಲಾಯಿ ಜಂಕ್ಷನ್ ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ರಮಾನಾಥ ರೈ, ಕಳೆದ ಚುನಾವಣೆಯಲ್ಲಿ ತಮ್ಮನ್ನು ಅಪಪ್ರಚಾರ, ಸುಳ್ಳು, ವದಂತಿಗಳ ಮೂಲಕ ಸೋಲಿಸಲಾಯಿತು. ಸೋತ ಬಗ್ಗೆ ಬೇಸರವಿಲ್ಲ, ಆದರೆ ಸೋಲಿಸಿದ ವಿಧಾನದ ಬಗ್ಗೆ ಬೇಸರವಿದೆ ಎಂದು ಹೇಳಿದರು. ಈ ಬಗ್ಗೆ ವಿಸ್ತ್ರತವಾಗಿ ಮಾತನಾಡುವಾಗ ರಮಾನಾಥ ರೈ ಭಾವುಕರಾಗಿ ಮಾತನ್ನು ಮುಂದುವರಿಸಲಾಗದೆ ಮಾತನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಈ ವೇಳೆ ನೆರೆದಿದ್ದವರೆಲ್ಲರ ಕಣ್ಣು ತುಂಬಿ ಬಂದುದು ಕಂಡು ಬಂತು.
ಕೆಪಿಸಿಸಿ ಮುಖಂಡರುಗಳಾದ ಅಶ್ವನಿ ಕುಮಾರ್ ರೈ, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರುಗಳಾದ ಶುಭಾಶ್ಚಂದ್ರ ಶೆಟ್ಟಿ, ಸದಾಶಿವ ಬಂಗೇರ, ಅಬ್ಬಾಸ್ ಅಲಿ, ಚಂದ್ರಶೇಖರ್ ಭಂಡಾರಿ, ಗಾಡ್ಫ್ರೀ ಫೆರ್ನಾಂಡಿಸ್, ರಿಚಾರ್ಡ್ ಫೆರ್ನಾಂಡಿಸ್, ಅಶೋಕ್ ಕೊಟ್ಟಾರಿ, ಅಬ್ದುಲ್ ಹಕೀಮ್, ಷರೀಫ್, ಇಕ್ಬಾಲ್, ಪ್ರೇಮಲತಾ, ನವಾಜ್, ಅಬ್ದುಲ್ ರಜಾಕ್, ಮಜೀದ್ ತಾಳಿಪಾಡಿ, ನಾಸಿರ್ ಹೊಸನಗರ ಮತ್ತಿತರರು ಉಪಸ್ಥಿತರಿದ್ದರು. ಬೆಂಜನಪದವು ಕಾರ್ಯಕ್ರಮ ರೋವಿಟ್ ಫೆರ್ನಾಂಡಿಸ್ ನಿರೂಪಿಸಿದರು. ಎರಡು ಕಾರ್ಯಕ್ರಮಗಳಲ್ಲೂ ಅಬ್ದುಲ್ ಹಕೀಮ್ ಧನ್ಯವಾದ ಸಲ್ಲಿಸಿದರು.



