

ಉಡುಪಿ: ಉಡುಪಿ ಕ್ಷೇತ್ರದಾದ್ಯಂತ ಕಂಡು ಬಂದ ಕಾಂಗ್ರೆಸ್ ಪರ ಅಲೆ ನನ್ನ ಆತ್ಮ ವಿಶ್ವಾಸ ಇಮ್ಮಡಿಗೊಳಿಸಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಹೇಳಿದರು.
ಅವರು ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರ, ವಾರ್ಡುವಾರು ಪಂಚಾಯತ್ ವಾರು ವೀಕ್ಷಕರ ಸಭೆಯಲ್ಲಿ ಮಾತಾಡಿದರು.
ಕಾಂಗ್ರೆಸ್ ಮುಖಂಡ ಮಾಜಿ ಜಿ. ಪಂ. ಸದಸ್ಯ ದಿವಾಕರ್ ಕುಂದರ್ ಮಾತನಾಡಿ, ಆಡಳಿತ ವಿರೋಧಿ ಅಲೆ, ವಿಪರೀತವಾದ ಬೆಲೆ ಏರಿಕೆ, ಬಿಜೆಪಿಯವರು ಮಾಡಿದ ಭ್ರಷ್ಟಾಚಾರ ಜನರಲ್ಲಿ ಬಿಜೆಪಿ ವಿರುದ್ಧ ಅಪಾರ ಆಕ್ರೋಶ ಮನೆ ಮಾಡಿದೆ ಎಂದರು.

ಕಾನೂನು ಬಾಹಿರ ಚಟುವಟಿಕೆಗೆ ಪ್ರಚೋದನೆ:
ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ ಮಾತನಾಡಿ, ಬಿಜೆಪಿ ತನ್ನ ಅಧಿಕಾರದ ಆಸೆ ಈಡೇರಿಸಲು ಅನೇಕ ಯುವ ಜನತೆಯ ಬಾಳನ್ನು ಹಾಳು ಮಾಡಿದೆ, ಕಾಂಗ್ರೆಸ್ ಪಕ್ಷ ಯುವ ಜನತೆಯ ಕೈಯಲ್ಲಿ ಪೆನ್ನು ಪುಸ್ತಕ ನೀಡಿ ಕಾಲೇಜಿಗೆ ಕಳುಹಿಸಲು ಪ್ರೇರೇಪಿಸಿದರೆ, ಬಿಜೆಪಿ ಪರ ಸಂಘಟನೆಗಳು ಆರ್ಥಿಕ ವಾಗಿ ಹಿಂದುಳಿದ ಅಮಾಯಕ ಯುವ ಜನರ ಕೈಯಲ್ಲಿ ಧರ್ಮ ರಕ್ಷಣೆ ಮಾಡುವ ನೆಪದಲ್ಲಿ ಆಯುಧಗಳನ್ನು ನೀಡಿ ಅವರಿಂದ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಲು ಪ್ರಚೋದನೆ ನೀಡುತ್ತಾ ಇವೆ, ಬಿಜೆಪಿ ಮೌನವಾಗಿ ಇದಕ್ಕೆ ಬೆಂಬಲ ನೀಡುತ್ತಾ ಇವೆ.
ಧೈರ್ಯದಿಂದ ಪ್ರಚಾರ ನಡೆಸಿ:
ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವತ್ತೂ ರಕ್ಷಣೆ ಕೊಡಲು ಪಕ್ಷ ಸಿದ್ದ ಇದೆ. ಯಾವ ಸಂದರ್ಭದಲ್ಲೂ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ, ಧೈರ್ಯದಿಂದ ಪ್ರಚಾರ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಹಿರಿಯ ನಾಯಕ ಮಹಾಬಲ ಕುಂದರ್ ಮಾತನಾಡಿ, ಮೀನುಗಾರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಾಲ ಕಾಲಕ್ಕೆ ಕಾಂಗ್ರೆಸ್ ಸರಕಾರಗಳು ಮಾಡಿಕೊಂಡು ಬಂದಿವೆ. ಮುಂದೆಯೂ ಮೀನುಗಾರರ ಸಮುದಾಯ ಕಾಂಗ್ರೆಸ್ ಸರಕಾರಗಳನ್ನು ನಂಬಿ ಪ್ರೋತ್ಸಾಹ ನೀಡಬೇಕು. ಕರಾವಳಿಯ ಆರ್ಥಿಕತೆಗೆ, ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುವ ಮೀನುಗಾರರು ಚುನಾವಣೆಯಲ್ಲಿ ದೊಡ್ಡ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ಆನಂದ ಪೂಜಾರಿ ಮಾತನಾಡಿ, ಈ ದೇಶದಲ್ಲಿ ಎಲ್ಲಾ ಜಾತಿ ಸಮುದಾಯಗಳಿಗೆ ಸಮಾನವಾಗಿ ಗೌರವಿಸಿ ನ್ಯಾಯ ನೀಡುವ ಏಕೈಕ ಪಕ್ಷ ಕಾಂಗ್ರೆಸ್. ಮತದಾರರು ಕಾಂಗ್ರೆಸ್‌ಅನ್ನು ಬೆಂಬಲಿಸಿದರೆ ದೇಶದ ಅಭಿವೃದ್ಧಿ ಆಗುವುದರಲ್ಲಿ ಸಂಶಯವೇ ಇಲ್ಲ ಎಂದರು.
ಮುಖಂಡರಾದ ದಿನೇಶ್ ಪುತ್ರನ್, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ, ಮಹಾಬಲ ಕುಂದರ್, ಸುಕೇಶ್ ಕುಂದರ್, ಕುಶಲ ಶೆಟ್ಟಿ, ಶರತ್ ಶೆಟ್ಟಿ, ಸದಾಶಿವ ಅಮೀನ್, ವಿಶ್ವಾಸ ಅಮೀನ್, ವೆರೊನಿಕಾ ಕರ್ನೆಲಿಯೋ, ಸುರೇಂದ್ರ ಶೆಟ್ಟಿ ಬನ್ನಂಜೆ, ಶಶಿರಾಜ್ ಕಡಿಯಾಳಿ, ಚಂದ್ರ ಮೋಹನ್, ಜ್ಯೋತಿ ಹೆಬ್ಟಾರ್, ಸುರೇಂದ್ರ ಆಚಾರ್ಯ, ಯಾದವ್ ಆಚಾರ್ಯ, ರಮೇಶ್ ಪೂಜಾರಿ, ಧನಂಜಯ್, ಆನಂದ ಪೂಜಾರಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಕೋವಿಡ್‌ನಲ್ಲೂ ಭ್ರಷ್ಟಾಚಾರ ನಡೆಸಿದ ಬಿಜೆಪಿ
ಕೋವಿಡ್ ಸಂದರ್ಭದಲ್ಲಿ ಅಪಾರ ಜನರ ಸಾವಿಗೆ ಕಾರಣವಾದದ್ದು ಅಧಿಕಾರದಲ್ಲಿ ಇದ್ದ ಇದೇ ಬಿಜೆಪಿ ಎಂದು ಜನತೆ ಮರೆಯಬಾರದು. ಜನರ ಜೀವ ಉಳಿಸುವುದನ್ನು ಬಿಟ್ಟು ಸರಕಾರ ಕೋವಿಡ್ ರೋಗವನ್ನೂ ಕೂಡ ಭ್ರಷ್ಟಾಚಾರ ಮಾಡಿ ಹಣ ಮಾಡಲು ಬಳಸಿಕೊಂಡಿದೆ. ಆಮ್ಲ ಜನಕ, ಐಸಿಯು, ಪಿಪಿಈ ಕಿಟ್, ಇಂಜೆಕ್ಷನ್ ಇತ್ಯಾದಿ ಸರಿಯಾಗಿ ಒದಗಿಸಲಿಲ್ಲ, ಆ ಸಂದರ್ಭದಲ್ಲಿ ಸರಿಯಾಗಿ ಶವ ಸಂಸ್ಕಾರ ಮಾಡಲು ಜನಪರದಾಡುವ ಸ್ಥಿತಿ ಕಲ್ಪಿಸಿದೆ. ಹಾಗೆ ಮಾಡಿದ ಬಿಜೆಪಿಯನ್ನು ಜನ ಅಧಿಕಾರದಿಂದ ಕಿತ್ತುಬಿಸಾಡಲೇ ಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.
