

IPL 2023 Kannada: ಇನಿಂಗ್ಸ್ ಆರಂಭಿಸಿದ ಆರ್ಸಿಬಿ ಮೊದಲ ಎಸೆತದಲ್ಲೇ ಆಘಾತ ಅನುಭವಿಸಿತ್ತು. ಆರಂಭಿಕ ಆಟಗಾರ ವಿರಾಟ್ ಕೊಹ್ಲಿಯನ್ನು ಟ್ರೆಂಟ್ ಬೌಲ್ಟ್ ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದರು

IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ರನ್ಗಳ ರೋಚಕ ಜಯ ಸಾಧಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಆರ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ಕೆ ಮಾಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಆರ್ಸಿಬಿ ಮೊದಲ ಎಸೆತದಲ್ಲೇ ಆಘಾತ ಅನುಭವಿಸಿತ್ತು. ಆರಂಭಿಕ ಆಟಗಾರ ವಿರಾಟ್ ಕೊಹ್ಲಿಯನ್ನು ಟ್ರೆಂಟ್ ಬೌಲ್ಟ್ ಶೂನ್ಯಕ್ಕೆ ಪೆವಿಲಿಯನ್ಗಟ್ಟಿದ್ದರು. ಆದರೆ ಇದಾದ ಬಳಿಕ ಜೊತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

3ನೇ ವಿಕೆಟ್ಗೆ ಜೊತೆಯಾದ ಡುಪ್ಲೆಸಿಸ್ ಹಾಗೂ ಮ್ಯಾಕ್ಸ್ವೆಲ್ 127 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಪರಿಣಾಮ 13.1 ಓವರ್ಗಳಲ್ಲಿ ಆರ್ಸಿಬಿ ತಂಡದ ಮೊತ್ತ 139 ಕ್ಕೆ ಬಂದು ನಿಂತಿತು. ಈ ಹಂತದಲ್ಲಿ ಡುಪ್ಲೆಸಿಸ್ (62) ರನೌಟ್ ಆಗಿ ನಿರ್ಮಿಸಿತು. ಇದರ ಬೆನ್ನಲ್ಲೇ ಮ್ಯಾಕ್ಸ್ವೆಲ್ (77) ಕೂಡ ಔಟಾದರು.

ಅಂದರೆ ಆರ್ಸಿಬಿ ತಂಡವು 13.1 ಓವರ್ಗಳಲ್ಲಿ ಪ್ರತಿ ಓವರ್ಗೆ 10 ರನ್ ಸರಾಸರಿಯಲ್ಲಿ 139 ರನ್ ಕಲೆಹಾಕಿದರೆ, ಉಳಿದ 6.5 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 50 ರನ್ ಮಾತ್ರ.

ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು 41 ಎಸೆತಗಳನ್ನು ಎದುರಿಸಿದರೂ 50 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದರ ನಡುವೆ 7 ವಿಕೆಟ್ಗಳನ್ನು ಕೂಡ ಕಳೆದುಕೊಂಡಿತ್ತು. ಇದರೊಂದಿಗೆ ಆರ್ಸಿಬಿ ತಂಡವು ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಅವಲಂಭಿಸಿರುವುದು ಮತ್ತೊಮ್ಮೆ ಸ್ಪಷ್ಟವಾಗಿದೆ.


ಏಕೆಂದರೆ 7 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 279 ರನ್ ಕಲೆಹಾಕಿದರೆ, ಗ್ಲೆನ್ ಮ್ಯಾಕ್ಸ್ವೆಲ್ 253 ರನ್ಗಳಿಸಿದ್ದಾರೆ. ಹಾಗೆಯೇ ಫಾಫ್ ಡುಪ್ಲೆಸಿಸ್ 7 ಪಂದ್ಯಗಳಲ್ಲಿ 405 ರನ್ ಬಾರಿಸಿದ್ದಾರೆ. ಈ ಮೂವರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟರ್ 70 ರನ್ ಕೂಡ ಕಲೆಹಾಕಿಲ್ಲ.

ದಿನೇಶ್ ಕಾರ್ತಿಕ್ 7 ಪಂದ್ಯಗಳಿಂದ ಒಟ್ಟು 61 ರನ್ಗಳಿಸಿದರೆ, ಶಹಬಾಝ್ ಅಹ್ಮದ್ 40 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಮಹಿಪಾಲ್ ಲೋಮ್ರರ್ 5 ಪಂದ್ಯಗಳಿಂದ 41 ರನ್ ಕಲೆಹಾಕಿದರೆ, ಸುಯಶ್ ಪ್ರಭುದೇಸಾಯಿ 3 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 19 ರನ್ ಮಾತ್ರ.

ಅಂದರೆ ಆರ್ಸಿಬಿ ಬ್ಯಾಟಿಂಗ್ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಅವರನ್ನು ಅವಲಂಭಿಸಿರುವುದು ಸ್ಪಷ್ಟ.

ಇದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಇದುವೇ ಈಗ ಆರ್ಸಿಬಿ ತಂಡ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ
