

ದ್ವಿಚಕ್ರ ವಾಹನವೊಂದು ಅಪಘಾತಕ್ಕೀಡಾಗಿ ಬಾಲಕ ಮೃತಪಟ್ಟ ಘಟನೆ ಮಂಗಳೂರು ನಗರದ ಹೊರವಲಯದ ಸೂರಿಂಜೆಯ ಕೋಟೆ ಎಂಬಲ್ಲಿ ನಡೆದಿದೆ. ಮುಹಮ್ಮದ್ ಸೈಫ್ (13) ಮೃತಪಟ್ಟ ಬಾಲಕ. ಆರು ಮಂದಿ ಸ್ನೇಹಿತರು ಮೂರು ದ್ವಿಚಕ್ರ ವಾಹನಗಳಲ್ಲಿ ಸೂರಿಂಜೆಯಿಂದ ಸುರತ್ಕಲ್ ಗೆ ಐಸ್ ಕ್ರೀಮ್ ತಿನ್ನಲು ಹೋಗುತ್ತಿದ್ದರು. ಈ ವೇಳೆ ಮನ್ಸೂರ್ ಎಂಬುವವರ ದ್ವಿಚಕ್ರ ವಾಹನದಲ್ಲಿ ಸೈಫ್ ಹಿಂಬದಿ ಸವಾರನಾಗಿದ್ದ. ಇವರಿದ್ದ ಸ್ಕೂಟರ್ ಸೂರಿಂಜೆಯ ಕೋಟೆ ಎಂಬಲ್ಲಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ರಭಸಕ್ಕೆ ಸೈಫ್ ಅವರ ತಲೆ ಡಾಂಬರ್ ರಸ್ತೆಗೆ ಬಲವಾಗಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ಸೂರಿಂಜೆಯ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಉತ್ತೀರ್ಣನಾಗಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದ. ಇನ್ನು ಈ ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

