

ಬೆಂಗಳೂರು: ರಾಜ್ಯದಲ್ಲಿ ನಾಮಿನೇಷನ್ (Nomination) ಭರಾಟೆ ಮುಕ್ತಾಯವಾಗಿದೆ. ಏಪ್ರಿಲ್ 13ರಿಂದ ಏಪ್ರಿಲ್ 20ರ ವರೆಗೆ 4,435 ನಾಮಪತ್ರ ಸಲ್ಲಿಕೆಯಾಗಿದ್ದು, ಏಪ್ರಿಲ್ 21 ರಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ನಾಮಪತ್ರ ವಾಪಸ್ ಪಡೆಯಲು ಇನ್ನೂ 4 ದಿನ ಬಾಕಿ ಇದೆ. ಕೊನೆಯ ದಿನ ಸಾಕಷ್ಟು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಹೆಬ್ಬಾಳದಲ್ಲಿ ಕಟ್ಟಾ ಜಗದೀಶ್, ಬೈರತಿ ಸುರೇಶ್, ಬ್ಯಾಟರಾಯನಪುರದಲ್ಲಿ ಕೃಷ್ಣ ಬೈರೇಗೌಡ, ಶಾಂತಿನಗರದಲ್ಲಿ ಎನ್.ಎ ಹ್ಯಾರಿಸ್, ಪುಲಕೇಶಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಸೇರಿ ಹಲವರು ನಾಮಪತ್ರ ಸಲ್ಲಿಸಿದ್ದಾರೆ.

ಭಾಲ್ಕಿಯಲ್ಲಿ ಪ್ರಕಾಶ್ ಖಂಡ್ರೆ ನಾಮಪತ್ರಕ್ಕೆ ಸಿಎಂ ಸಾಕ್ಷಿಯಾಗಿದ್ದಾರೆ. ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ, ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿ, ಹೊನ್ನಾಳಿಯಲ್ಲಿ ಎಂ.ಪಿ ರೇಣುಕಾಚಾರ್ಯ, ಬಂಟ್ವಾಳದಲ್ಲಿ ರಾಮನಾಥ್ ರೈ, ಕೃಷ್ಣರಾಜ ಕ್ಷೇತ್ರದಲ್ಲಿ ಶ್ರೀವತ್ಸ, ಶಿಗ್ಗಾಂವಿಯಲ್ಲಿ ಯಾಸೀರ್ ಪಠಾಣ್, ಕೋಲಾರದಲ್ಲಿ ಕೊತ್ತೂರು ಮಂಜುನಾಥ್, ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್, ಮಂಗಳೂರು ಉತ್ತರದಲ್ಲಿ ಮೊಯ್ದಿನ್ ಬಾವಾ ಕಣಕ್ಕಿಳಿದಿದ್ದಾರೆ

ತುಮಕೂರಿನಲ್ಲಿ (Tumakuru) ಪಕ್ಷೇತರರಾಗಿ ಸೊಗಡು ಶಿವಣ್ಣ, ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರರಾಗಿ, ಕುಂದಗೋಳದಲ್ಲಿ ಐ.ಎಸ್ ಚಿಕ್ಕನಗೌಡರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್‌ನ ಮೂವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಶಿರಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ ಕೊನೆಯ ದಿನ ಬಿ-ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದಾರೆ.

ಗುರುವಾರ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೀವ್‌ಗೌಡ, ಪಕ್ಷೇತರ ಅಭ್ಯರ್ಥಿ ಪುಟ್ಟು ಅಂಜನಪ್ಪ ಬೆಂಬಲಿಗರ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು

