

ಶಿವಮೊಗ್ಗ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಟಿಕೆಟ್ ಹಂಚಿಕೆ ಸಂಬಂಧ ಬಿಜೆಪಿಯಲ್ಲಿ ಬಂಡಾಯ ಜೋರಾಗಿದೆ. ಟಿಕೆಟ್ ಕೈತಪ್ಪಿದ್ದರಿಂದ ಒಬ್ಬೊಬ್ಬರೇ ಪ್ರಭಾವಿ ನಾಯಕರು ಬಿಜೆಪಿ ತೊರೆಯುತ್ತಿದ್ದಾರೆ. ಇದೀಗ ಶಿವಮೊಗ್ಗದ(Shivamogga) ಬಿಜೆಪಿ ನಾಯಕ ಆಯನೂರು ಮಂಜುನಾಥ್(Ayanur Manjunath) ವಿಧಾನಪರಿಷತ್ ಹಾಗೀ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಆಯನೂರು ಮಂಜುನಾಥ್ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಇನ್ನೂ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆದರೂ ಟಿಕೆಟ್ ಸಿಗುವುದು ಖಾತ್ರಿ ಇಲ್ಲದಿರುವುದರಿಂದ ರಾಜೀನಾಮೆ ಘೋಷಿಸಿದ್ದಾರೆ. ಇದರಿಂದ ಚುನಾವಣೆಗೂ ಮೊದಲೇ ಶಿವಮೊಗ್ಗದಲ್ಲಿ ಬಿಜೆಪಿಗೆ ಮರ್ಮಾಘಾತವಾಗಿದೆ

ಶಿಮಮೊಗ್ಗದಲ್ಲಿಂದು ಬೆಳ್ಳಂಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆಯನೂರು ಮಂಜುನಾಥ್, ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ. ಇಂದು ಮಧ್ಯಾಹ್ನ ಹುಬ್ಬಳ್ಳಿಗೆ ತೆರಳಿ ಸಭಾಪತಿಗಳನ್ನು ಭೇಟಿಯಾಗಿ ರಾಜೀನಾಮೆ ನೀಡುವೆ. ಅಲ್ಲದೇ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ನಾಳೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧೆ ಎಂಬುದನ್ನು ಮಧ್ಯಾಹ್ನದ ಬಳಿಕ ತಿಳಿಸುವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವೆ. ಟಿಕೆಟ್ಗೋಸ್ಕರ ನಾನು ಪಕ್ಷ ಬಿಡುತ್ತಿಲ್ಲ. ನಗರದ ಋಣ ತೀರಿಸಲು ಈ ನಿರ್ಧಾರ ಮಾಡಿರುವೆ . ಈಶ್ವರಪ್ಪ ಕಣದಲ್ಲಿ ಇದ್ದರೆ. ನಾನು ಕೊಡುವ ಲೆಕ್ಕ ತುಂಬಾ ಇದೆ. ಆ ಲೆಕ್ಕ ಈ ಚುನಾವಣೆಯಲ್ಲಿ ಕೊಡುತ್ತೇನೆ.ಯಡಿಯೂರಪ್ಪ ಪರ ಹೇಳಿಕೆ ನೀಡಿದ ಏಕೈಕ ವ್ಯಕ್ತಿ ನಾನು. ಅವರ ಮೇಲೆ ಆರೋಪ ಸಮಸ್ಯೆಗಳು ಬಂದಾಗ ನಾನೇ ಒಬ್ಬನೇ ಅವರ ಪರ ಉತ್ತರ ಕೊಟ್ಟಿದ್ದೆ. ಮಹಾನಗರ ಪಾಲಿಕೆ ಕಮೀಷನ್ ದಂಧೆ ಬಗ್ಗೆ ಯಾರು ಧ್ವನಿ ಎತ್ತಲಿಲ್ಲ ಎಂದು ಪರೋಕ್ಷವಾಗಿ ಕೆಎಸ್ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ನಾಳೆ ನಾನು ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸುತ್ತೇನೆ. ಮನಸ್ಸಿಗೆ ಬಂದಂತೆ ಮಾತನಾಡುವ ಬಾಯಿಗೆ ಹೊಲಿಗೆ ಬೀಳಲಿ. ಮುರಿದ ಮನಸ್ಸು ಒಂದಾಗಬೇಕು ಎಂದು ಹೇಳಿದ್ಥೆ. ಈಗಾಗಲೇ ಕೆಲವರ ನಾಲಿಗೆಗೆ ನಿಯಂತ್ರಣ ಬಂದಿದೆ. ನನ್ನ ನಿಲುವು ಎಲ್ಲರೂ ಪ್ರಶಂಸೆ ಮಾಡಿದ್ದಾರೆ. ಕೈಗಾರಿಕೋದ್ಯಮಿ ಶಿವಮೊಗ್ಗ ಮುಂದೆ ಬಂದಿಲ್ಲ. ಶಿವಮೊಗ್ಗಕ್ಕೆ ಘನತೆ ಗೌರವಕ್ಕೆ ಕಪ್ಪು ಚುಕ್ಕೆ ಬಂದಿದೆ ಎಂದು ಹೆಸರು ಹೇಳದೇ ಈಶ್ವರಪ್ಪ ಕಿಡಿಕಾರಿದರು.

