

ಎಸ್ಜೆ ಪಾರ್ಕ್ ಪೊಲೀಸ್ ಠಾಣೆ ಬಳಿ ಒಂದು ಕೋಟಿ ನಗದು ಪತ್ತೆ ಪ್ರಕರಣ ಸಂಬಂಧ ಎಸ್ಜೆ ಪಾರ್ಕ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿರುವಾಗ ಸತ್ಯಸಂಗತಿಯೊಂದು ಹೊರಬಿದ್ದಿದೆ. ರಾಜಕೀಯ ನಾಯಕರೊಬ್ಬರಿಗೆ ಸೇರಿದ ಹಣ ಇದಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ನಗರದ ಎಸ್ಜೆ ಪಾರ್ಕ್ ಪೊಲೀಸ್ ಠಾಣೆ ಬಳಿ ಒಂದು ಕೋಟಿ ನಗದು ಪತ್ತೆ ಪ್ರಕರಣ ಸಂಬಂಧ ಪೊಲೀಸ್ ವಿಚಾರಣೆ ವೇಳೆ ಹವಾಲ ಮೂಲಕ ಹಣ ರವಾನೆ ಮಾಡಿತ್ತಿದ್ದ ವಿಚಾರ ಬಯಲಿಗೆ ಬಂದಿದೆ.

ಬೆಂಗಳೂರಿನ ವಿಜಯ ನಗರದಿಂದ ಜಯನಗರಕ್ಕೆ ರವಾನೆ ಮಾಡುತ್ತಿದ್ದಾಗ ಎಸ್ಜೆ ಪಾರ್ಕ್ ಪೊಲೀಸ್ ಠಾಣೆ ಬಳಿ ಆಟೋ ಕೆಟ್ಟು ನಿಂತಿದೆ. ಇದನ್ನು ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಕೋಟಿ ರೂಪಾಯಿ ಪತ್ತೆಯಾಗಿತ್ತು. ಕೂಡಲೇ ಆಟೋದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದ್ದರು.

ಸುರೇಶ್ ಮತ್ತು ಪ್ರವೀಣ್ ಎಂಬುವವರು ಹಣ ಸಾಗಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದವರಾಗಿದ್ದಾರೆ. ಇವರನ್ನು ವಿಚಾರಣೆಗೊಳಪಡಿಸಿದಾಗ ಬಿಜೆಪಿ ಪಾರ್ಟಿಗೆ ಸೇರಿದ ಹಣ ಎಂದು ತಿಳಿದುಬಂದಿದೆ. ಬಿಜೆಪಿ ನಾಯಕರೊಬ್ಬರಿಗೆ ತಲುಪಿಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ಬಾಯಿಬಿಟ್ಟಿದ್ದಾರೆ.
ಸದ್ಯ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಐಟಿ ಮತ್ತು ಇಡಿಗೆ ರವಾನೆ ಮಾಡಿದ್ದು, ಐಟಿ ಅಧಿಕಾರಿಗಳು ಅಖಾಡಕ್ಕಿಳಿದಿದ್ದಾರೆ. ಇತ್ತ ಇಡಿ ಅಧಿಕಾರಿಗಳು ಹವಾಲ ಬಗ್ಗೆ ಪರಿಶೀಲನೆ ನಡೆಸುತಿದ್ದಾರೆ.

ಆಟೋದಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದವರು ಕೇವಲ ಕೆಲಸಗಾರರಾಗಿದ್ದಾರೆ. ಅವರಿಗೆ ಹಣ ತಲುಪಿಸುವ ಕೆಲಸ ಮಾತ್ರ ನೀಡಲಾಗಿತ್ತು. ಅದನ್ನು ಹೊರತುಪಡಿಸಿ ಹಣದ ಬೇರೆ ಮಾಹಿತಿ ಲಭ್ಯವಿಲ್ಲ. ಈ ಪ್ರಕರಣದಿಂದ ಚುನಾವಣೆಯಲ್ಲಿ ಹವಾಲ ಮೂಲಕ ಹಣಕಾಸು ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದುಬಂದ ಹಿನ್ನಲೆ ಕೇಂದ್ರ ಸಂಸ್ಥೆಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


