

ಬೆಂಗಳೂರು(ಏ.16): ಚುನಾವಣಾ ಅಕ್ರಮದ ಮೇಲೆ ನಿಗಾವಹಿಸಿರುವ ಚುನಾವಣಾ ಆಯೋಗವು ಶನಿವಾರ 6.32 ಕೋಟಿ ರು. ನಗದನ್ನು ವಶಪಡಿಸಿಕೊಂಡಿದೆ. ದಾಸರಹಳ್ಳಿ ಕ್ಷೇತ್ರದಲ್ಲಿ 2.79 ಕೋಟಿ ರು. ನಗದು, ಶಿವಾಜಿನಗರ ಕ್ಷೇತ್ರದಲ್ಲಿ 65 ಲಕ್ಷ ರು. ನಗದು, ಗೋಕಾಕ್ ಕ್ಷೇತ್ರದಲ್ಲಿ 55 ಲಕ್ಷ ರು., ನಗದು, ಚಿಕ್ಕಪೇಟೆ ಕ್ಷೇತ್ರದಲ್ಲಿ 52 ಲಕ್ಷ ರು., ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ 44 ಲಕ್ಷ ರು., ರಾಜರಾಜೇಶ್ವರಿ ಕ್ಷೇತ್ರದಲ್ಲಿ 63.50 ಲಕ್ಷ ರು. ನಗದನ್ನು ಜಪ್ತಿ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ 3.18 ಕೋಟಿ ರು. ಮೌಲ್ಯದ 4 ಕೆಜಿಗೂ ಅಧಿಕ ಚಿನ್ನ, ಮಲ್ಲೇಶ್ವರ ಕ್ಷೇತ್ರದಲ್ಲಿ 1.29 ಕೋಟಿ ರು. ಮೌಲ್ಯದ 2 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 67.34 ಕೋಟಿ ರು. ನಗದು, 18.44 ಕೋಟಿ ರು. ಮೌಲ್ಯದ ಉಚಿತ ಕೊಡುಗೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 33.91 ಕೋಟಿ ರು. ಮೌಲ್ಯದ 7.97 ಲಕ್ಷ ಲೀಟರ್ ಮದ್ಯ, 13.35 ಕೋಟಿ ರು. ಮೌಲ್ಯದ 650.32 ಕೆಜಿ ಮಾದಕ ವಸ್ತುಗಳು, 26 ಕೋಟಿ ರು. ಮೌಲ್ಯದ 61.21 ಕೆಜಿ ಚಿನ್ನ, 28.59 ಕೋಟಿ ರು. ಮೌಲ್ಯದ 441.617 ಕೆಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು ಈವರೆಗೆ ನಗದು ಸೇರಿದಂತೆ 161.66 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

1,334 ಎಫ್‌ಐಆರ್, 67,478 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 3834 ಪ್ರಕರಣಗಳನ್ನು ದಾಖಲಿಸಲಾಗಿದೆ. 5,663 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 9,678 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದೆ.
