

ಬೆಂಗಳೂರು (ಏ.15) : ಕಾಂಗ್ರೆಸ್ ಹಾಗೂ ಜೆಡಿಎಸ್‌ಗಿಂತ ತಡವಾಗಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದರೂ, ಬಿಜೆಪಿ ಪಾಲಿಗೆ ಈಗ ಉಳಿದುಕೊಂಡಿರುವುದು 12 ಕ್ಷೇತ್ರಗಳ ಟಿಕೆಟ್ ಮಾತ್ರ. ಇಂದು ಸಂಜೆ ಬಿಜೆಪಿ ಹೈಕಮಾಂಡ್ ಮೂರನೇ ಪಟ್ಟಿ ಬಿಡುಗಡೆ ಮಾಡಲಿದ್ದು, ಮೂರನೇ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್ ಸಿಗಲಿದೆ ಎಂಬುದು ಸದ್ಯ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಈ ಕ್ಷೇತ್ರಗಳಿಗೆ ಹೊಸಬರನ್ನು ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿ ಹೈಕಮಾಂಡ್ ಚಿಂತನೆ ನಡೆಸಿದೆ.

ಬಹಳಷ್ಟು ಕುತೂಹಲ ಮೂಡಿಸಿದ ಬಿಜೆಪಿ ಮೂರನೆ ಪಟ್ಟಿಯಲ್ಲಿ ಮಹಾದೇವಪುರ, ಹುಬ್ಬಳ್ಳಿ ಸೆಂಟ್ರಲ್, ಶಿವಮೊಗ್ಗ , ಗೋವಿಂದರಾಜನಗರ ಕ್ಷೇತ್ರದ ಟಿಕೆಟ್ ಯಾರಿಗೆ ಒಲಿಯತ್ತೆ ಎಂಬುದೇ ಕಾತುರದಿಂದ ಕಾಯುವಂತೆ ಮಾಡಿದೆ. ಮಹಾದೇವಪುರದಲ್ಲಿ ಹೊಸ ಅಭ್ಯರ್ಥಿಗೆ ಮಣೆ ಹಾಕಿ ಅಚ್ಚರಿ ಮೂಡಿಸಲಿದೆಯಾ ಹೈಕಮಾಂಡ್? ಇನ್ನು ಗೋವಿಂದರಾಜನಗರದಲ್ಲಿ ಅರುಣ್ ಸೋಮಣ್ಣ ಹೆಸರು ಕೇಳಿಬಂದಿತ್ತಾದರೂ ಸಚಿವ ವಿ ಸೋಮಣ್ಣ ಶಿಷ್ಯ ಉಮೇಶ್ ಶೆಟ್ಟಿ ಹೆಸರು ಮುಂಚೂಣಿಯಲ್ಲಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಕಾರ್ಪೊರೇಟರ್ ಆಗಿರುವ ಉಮೇಶ್ ಶೆಟ್ಟಿಗೆ ಟಿಕೆಟ್ ಒಲಿಯಲಿದೆ ಎಂದೇ ಹೇಳಲಾಗುತ್ತಿದೆ.
