

ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಖರ್ಗೆ, ನಾನು, ಸಿದ್ದರಾಮಯ್ಯ ಎಲ್ಲರೂ ಪಕ್ಷ ಹೇಳಿದಂತೆ ಕೇಳಬೇಕು. ಕಾಂಗ್ರೆಸ್ ಏನನ್ನು ಹೇಳುತ್ತದೆ ಅದನ್ನು ಎಲ್ಲರೂ ಕೇಳಬೇಕು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ: ಡಿ.ಕೆ.ಶಿವಕುಮಾರ್
ಶೃಂಗೇರಿ(ಏ.11): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಮತ್ತೊಮ್ಮೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಎಳೆತಂದಿದ್ದಾರೆ. ಖರ್ಗೆ ನಮ್ಮ ಪಕ್ಷದ ಹಿರಿಯ ನಾಯಕ. ಎಐಸಿಸಿ ಅಧ್ಯಕ್ಷರಾಗಿರುವ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಕೂಗು ರಾಜ್ಯದಲ್ಲಿದೆ. ಆದರೆ ಅವರು ಏನನ್ನೂ ಕೇಳಿಲ್ಲ ಎಂದು ತಿಳಿಸಿದ್ದಾರೆ.

ಸೋಮವಾರ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಇಚ್ಛೆ ಖರ್ಗೆ ಅವರದ್ದು. ಅದಕ್ಕಾಗಿ ಅವರು ದುಡಿಯುತ್ತಿದ್ದಾರೆ. ಅವರಿಗೆ ಹಿಂದೆ ಅನ್ಯಾಯವಾಗಿದೆ ಎಂಬ ಕೂಗು ಇದೆ. ಎಲ್ಲರೂ ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಬೇಕು. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಖರ್ಗೆ, ನಾನು, ಸಿದ್ದರಾಮಯ್ಯ ಎಲ್ಲರೂ ಪಕ್ಷ ಹೇಳಿದಂತೆ ಕೇಳಬೇಕು. ಕಾಂಗ್ರೆಸ್ ಏನನ್ನು ಹೇಳುತ್ತದೆ ಅದನ್ನು ಎಲ್ಲರೂ ಕೇಳಬೇಕು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸಿಎಂ ಡಿಕೆಶಿಗೆ ಜೈ:
ಡಿ.ಕೆ.ಶಿವಕುಮಾರ್ ಅವರು ಹೆಲಿಪ್ಯಾಡ್‌ಗೆ ತೆರಳಿದಾಗ ಕಾರ್ಯಕರ್ತರು ಜಮಾವಣೆಗೊಂಡು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜೈ ಎಂದು ಘೋಷಣೆ ಕೂಗತೊಡಗಿದರು. ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಜೈಕಾರ, ಘೋಷಣೆಗಳನ್ನು ಕೂಗಿದರು. ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬ ಕಾರ್ಯಕರ್ತರ ಘೋಷಣೆಗಳು ಹೆಲಿಪ್ಯಾಡ್‌ನಲ್ಲಿ ಮೊಳಗತೊಡಗಿತು. ನಂತರ ಕಾಪ್ಟರ್ ಮೂಲಕ ಅವರು ತೆರಳಿದರು.
