

ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವ ಮತ್ತು ಹಿಂದಿನ ಎರಡು ಚುನಾವಣೆಗಳಲ್ಲಿ ಮತದಾನ ಕಡಿಮೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಮುಖ್ಯ ಚುನಾವಣಾಧಿಕಾರಿಯೂ ಕಳವಳ ವ್ಯಕ್ತಪಡಿಸಿದ್ದರು. ಈ ನಡುವೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (Chief Electoral Officer of Karnataka) ಟ್ವಿಟರ್ ಖಾತೆ ಮೂಲಕ ಮ್ಯಾಗಿ ಜಾಹಿರಾತು ಮಾದರಿಯಲ್ಲಿಯೇ ಮತದಾರರನ್ನು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. “ನೀವು ಈವಾಗ ವೋಟ್ ಮಾಡೋದಕ್ಕೆ ಸ್ವಲ್ಪ ಸಮಯ ತೆಗೆದಿಟ್ರೆ ಮುಂದೆ 5 ವರ್ಷ ಆರಾಮಾಗಿ ಇರಬಹುದು. ಜವಾಬ್ದಾರಿಯುತವಾಗಿರಿ, ನಿಮ್ಮ ಪ್ರತಿ ಮತವೂ ಅಮೂಲ್ಯ.” ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.

ಪೋಸ್ಟ್ನಲ್ಲಿ ಏನಿದೆ?; ವೋಟ್ 2 ಮಿನಿಟ್ ಟಾಸ್ಕ್ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಈ ಮತದಾನದ ಜಾಗೃತಿ ಪೋಸ್ಟ್ ನೋಡಿದಾಗ ಮ್ಯಾಗಿ ಜಾಹೀರಾತು ನೋಡಿದಂತಾಗಬಹುದು. ಅದೇ ಮಾದರಿಯಲ್ಲಿ ಪೋಸ್ಟ್ ಸಿದ್ದಪಡಿಸಲಾಗಿದೆ.
ಕೆಲಸದಲ್ಲೇ ಬ್ಯುಸಿಯಾಗಿರುವ ಯುವ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಲು ಹೋಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ. ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಹಿಂದಿನ ಎರಡು ಚುನಾವಣೆಗಳಲ್ಲಿ ಮತದಾನ ಕಡಿಮೆಯಾಗಿದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ನಗರ ಕ್ಷೇತ್ರಗಳಲ್ಲಿ 2018ರಲ್ಲಿ ಅತಿ ಕಡಿಮೆ ಮತದಾನವಾಗಿತ್ತು. ಇದು ರಾಜ್ಯದ ಒಟ್ಟಾರೆ ಮತದಾನ ಪ್ರಮಾಣ ಶೇ 72ಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿತ್ತು. 2013ರ ಚುನಾವಣೆಯಲ್ಲಿ ನಡೆದ ಮತದಾನಕ್ಕಿಂತಲೂ ಕಡಿಮೆಯಾಗಿತ್ತು.

ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಚುನಾವಣಾ ಆಯೋಗದ (ECI) ಮುಖ್ಯ ಆಯುಕ್ತ ರಾಜೀವ್ ಕುಮಾರ್, ನಾವು ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾನಿಲಯಗಳನ್ನು ಸಂಪರ್ಕಿಸಿದ್ದು, ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಸಾಕ್ಷರತಾ ಕ್ಲಬ್‌ಗಳು ಮತ್ತು ಸ್ವಯಂಪ್ರೇರಿತ ಕಾರ್ಯಕ್ರಮಗಳಂತಹ ಜಾಗೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಜೊತೆಗೆ, ನಾವು ಐಟಿ ವಲಯವನ್ನು ಕೂಡ ಮತದಾನ ಜಾಗೃತಿಯಲ್ಲಿ ಭಾಗಿಯಾಗುವಂತೆ ವಿನಂತಿಸಿದ್ದೇವೆ. ಚುನಾವಣಾ ಜಾಗೃತಿ ನಿಟ್ಟಿನಲ್ಲಿ ಎಲೆಕ್ಥಾನ್ ನಡೆಸುತ್ತಿರುವ ಐಐಎಸ್ಸಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಐಐಎಸ್ಸಿ ಹೊರತುಪಡಿಸಿ ಐಐಟಿ ಕೂಡ ಆಯೋಗದ ಜೊತೆ ಕೈಜೋಡಿಸಿದೆ ಎಂದು ಅವರು ಹೇಳಿದ್ದರು.

