

ರಾಮನಗರ: ಕನಕಪುರ (Kanakapura) ತಾಲೂಕಿನ ಸಾತನೂರಿನಲ್ಲಿ (Sathanur) ಗೋವುಗಳ ಸಾಗಣೆ ವೇಳೆ ಹಿಂದುತ್ವ ಕಾರ್ಯಕರ್ತರು ಹೊಡೆದು ಸಾವನ್ನಪ್ಪಿದ ಪ್ರಕರಣದ ತನಿಖೆ ಚುರುಕು ಗೊಂಡಿದೆ. ಈ ಬೆನ್ನಲ್ಲೇ ಸೋಮವಾರ ಸಂಜೆ ಐಜಿಪಿ (IGP) ರವಿಕಾಂತೇಗೌಡ ಸಾತನೂರಿಗೆ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಾರ್ವಜನಿಕರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.

ಮಂಡ್ಯ (Mandya) ಮೂಲದ ಇದ್ರೀಷ್ ಪಾಷಾ ಸಾವಿಗೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಕಾರಣ ಎಂದು ಪಾಷಾ ಕುಟುಂಬಸ್ಥರ ದೂರಿನ ಅನ್ವಯ ಎಫ್‌ಐಆರ್ (FIR) ದಾಖಲಾಗಿದ್ದು, ಪುನೀತ್ ಕೆರೆಹಳ್ಳಿ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬಂಧಿಸುವಂತೆ ಒತ್ತಾಯಿಸಿ, ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇತ್ತ ತನಿಖೆ ಚುರುಕುಗೊಳ್ಳುತ್ತಿದ್ದಂತೆಯೇ ಪುನೀತ್ ಕೆರೆಹಳ್ಳಿ ಕೂಡಾ ಪ್ರಕರಣ ಕುರಿತು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಟ್ಟಿದ್ದಾನೆ . ಇಡೀ ಪ್ರಕರಣದ ಯಾವುದೇ ರೀತಿಯ ತನಿಖೆಗೆ ನಾನು ಸಿದ್ಧನಿದ್ದೇನೆ. ಅನವಶ್ಯಕವಾಗಿ ನನ್ನನ್ನು ತಪ್ಪಿತಸ್ಥ ಎಂದು ದೂರಲಾಗುತ್ತಿದೆ. ಜೆಡಿಎಸ್ (JDS) ಹಾಗೂ ಕಾಂಗ್ರೆಸ್ (Congress) ನಾಯಕರು ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಡೀ ಘಟನೆಯನ್ನು ನಾನು ಫೇಸ್‌ಬುಕ್ (Facebook) ಲೈವ್ ಮಾಡಿದ್ದೇನೆ. ಆದರೆ ಪೊಲೀಸರು ನನ್ನ ಲೈವ್ ವೀಡಿಯೋ ಡಿಲೀಟ್ ಮಾಡಿದ್ದಾರೆ. ಎಫ್‌ಐಆರ್ ಮಾಡಿ ನನ್ನ ಮೇಲೆ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾನೆ.

