

ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಹೊನ್ನಾಳಿ ಕ್ಷೇತ್ರದ ಜನರೊಂದಿಗೆ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಸಭೆ ನಡೆಸುತ್ತಿದ್ದಾಗ ಚುನಾವಣಾ ಅಧಿಕಾರಿಗಳು ಎಂಟ್ರಿಕೊಟ್ಟ ಹಿನ್ನೆಲೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಬೆಂಗಳೂರು: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ಪಡೆಯದೇ ನಗರದ ಶಿವಾನಂದ ಸರ್ಕಲ್ ಬಳಿ ಬಿಜೆಪಿ ಶಾಸಕ (MP Renukacharya) ಅವರು ಹೊನ್ನಾಳಿ ಕ್ಷೇತ್ರದ ಜನರೊಂದಿಗೆ ಸಭೆ ನಡೆಸಿದ್ದಾರೆ. ಮಾಹಿತಿ ತಿಳಿದ ಚುನಾವಣಾ ಅಧಿಕಾರಿಗಳು ರೇಣುಕಾಚಾರ್ಯ ಅವರ ಭಾಷಣದ ವೇಳೆ ದಾಳಿ ನಡೆಸಿ ಸಭೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಸಭೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಂಡ ಅಧಿಕಾರಿಗಳು ರೇಣುಕಾಚಾರ್ಯ ಅವರು ಬಳಸುತ್ತಿದ್ದ ಮೈಕ್ ಕಸಿಯಲು ಯತ್ನಿಸಿದ್ದಾರೆ. ಆದರೆ ಕ್ಯಾರೇ ಎನ್ನದ ರೇಣುಕಾಚಾರ್ಯ ಭಾಷಣ ಮುಂದುವರಿಸಿದ್ದಾರೆ. ಕೊನೆಗೆ ಅಧಿಕಾರಿಗಳ ಸೂಚನೆಯಂತೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.

ಗುರುರಾಜ ಕಲ್ಯಾಣಮಂಟಪದಲ್ಲಿ ಹೊನ್ನಾಳಿ ಕ್ಷೇತ್ರದ ಜನರ ಸಭೆ ಕರೆದ ಹಿನ್ನೆಲೆ ರೇಣುಕಾಚಾರ್ಯ ಅವರು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಿದ್ದರು. ಆದರೆ ಇದಕ್ಕೂ ಮುನ್ನ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ಸಭೆಯನ್ನು ಮೊಟಕುಗೊಳಿಸಿ, ಸಭೆಯಲ್ಲಿ ನೆರೆದಿದ್ದ ಜನರಿಗೆ ಊಟ ಮಾಡಲೂ ಅವಕಾಶ ನೀಡದೆ ತಂದಿದ್ದ ಕ್ಯಾಟರಿಂಗ್ ಊಟವನ್ನು ವಾಪಸ್ ಕಳುಹಿಸಿದ್ದಾರೆ. ಸದ್ಯ ರೇಣುಕಾಚಾರ್ಯ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆಯನ್ನೂ ಜಾರಿ ಮಾಡಲಾಗಿದೆ. ಅದರಂತೆ ಯಾವುದೇ ರಾಜಕೀಯ ಪಕ್ಷಗಳು ಸಭೆ ಸಮಾರಂಭಗಳನ್ನು ನಡೆಸಬೇಕಾದರೆ ಚುನಾವಣೆ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ರೇಣುಕಾಚಾರ್ಯ ಅವರು ಯಾವುದೇ ಅನುಮತಿ ಪಡೆಯದ ಹಿನ್ನೆಲೆ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿ ಸಭೆಯನ್ನು ರದ್ದುಗೊಳಿಸಿದ್ದಾರೆ.