

ಶ್ರೀನಗರ: ಭೂಕಂಪನ (Erathquake) ನಡೆಯುತ್ತಿದ್ದಂತೆ ಹೆರಿಗೆ ಮಾಡಿಸಿ ವೈದ್ಯರು ತಾಯಿ-ಮಗುವಿನ ಜೀವವನ್ನು ಉಳಿಸಿದ ಘಟನೆ ಅನಂತ್ನಾಗ್ ಆಸ್ಪತ್ರೆಯಲ್ಲಿ ನಡೆದಿದೆ.
ಮಂಗಳವಾರ ಮಹಿಳೆ ಹೆರಿಗೆಗೆಂದು (Delivery) ಬಿಜ್ಬೆಹರಾದ ಎಸ್ಡಿಹೆಚ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅದರಂತೆ ವೈದ್ಯರು ಹೆರಿಗೆ ಕಾರ್ಯಕ್ಕೆ ಮುಂದಾದ ಸಮಯದಲ್ಲಿ ಭೂಮಿ ಕಂಪಿಸಿದೆ. ಈ ವೇಳೆ ಧೃತಿಗೆಡದ ವೈದ್ಯರು ಲೋವರ್ ಸೆಗ್ಮೆಂಟ್ ಸಿಸೇರಿಯನ್ (Lower Segment Caesarean) ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿ ತಾಯಿ ಹಾಗೂ ಮಗುವಿನ ಜೀವ ಉಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ, ಲೋವರ್ ಸೆಗ್ಮೆಂಟ್ ಸಿಸೇಯರಿನ್ ಮಾಡಿದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಸಿಬ್ಬಂದಿ ಶಸ್ತ್ರಚಿಕಿತ್ಸೆಯ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು.
ವೀಡಿಯೋದಲ್ಲಿ ವೈದ್ಯರು ಹೆರಿಗೆ ಮಾಡಿಸುತ್ತಿದ್ದ ಸಂದರ್ಭದಲ್ಲಿ ಭೂಮಿ ಕಂಪಿಸುವುದನ್ನು ನೋಡಬಹುದು. ಅಫ್ಘಾನಿಸ್ತಾನದ ಹಿಂಡು ಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಪರಿಣಾಮ ಅನಂತ್ನಾಗ್ ಕಣಿವೆಯಲ್ಲಿಯೂ ಭೂಮಿ ಕಂಪಿಸಿದೆ. ಭೂಕಂಪನದಿಂದ ಬೆಚ್ಚಿಬಿದ್ದ ಜನ ಮನೆಯಿಂದಾಚೆ ಓಡಿ ಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
