

ತುಮಕೂರು: ಫಾರಂಗೆ ನುಗ್ಗಿ 200 ಕೋಳಿಗಳನ್ನು ಚಿರತೆ ತಿಂದಿರುವಂತಹ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಗಚಿಹಳ್ಳಿ ಗ್ರಾಮದ ತೋಟದಲ್ಲಿ ನಡೆದಿದೆ. ಮಹಾಲಕ್ಷ್ಮೀ ಗಿರೀಶ್ ಎಂಬುವರಿಗೆ ಸೇರಿದ ಫಾರಂ ಆಗಿದ್ದು, ದನ, ಕುರಿ, ಮೇಕೆಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ, ಇದೀಗ ಫಾರಂಗೆ ನುಗ್ಗಿ ಕೋಳಿ ತಿಂದಿದೆ. ಸಾಲ ಮಾಡಿ ಕೋಳಿ ಫಾರಂ ಮಾಡಿದ್ದ ರೈತರು ಕಣ್ಣೀರು ಹಾಕುವಂತಾಗಿದೆ. ಕಾಡು ಪ್ರಾಣಿಗಳ ದಾಳಿಯಿಂದ ಜಾನುವಾರುಗಳು ಸತ್ತರೆ ಅರಣ್ಯ ಇಲಾಖೆ ಪರಿಹಾರ ನೀಡುತ್ತೆ. ಆದರೆ ಪಶು ಇಲಾಖೆ ಮಾತ್ರ ಕೋಳಿಗಳಿಗೆ ಪರಿಹಾರ ನೀಡುತ್ತಿಲ್ಲ. ಹಾಗಾಗಿ ಪರಿಹಾರ ಸಿಗದೆ ರೈತರು ಕಂಗಲಾಗಿದ್ದು, ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಒತ್ತಾಯಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬಳ್ಳಾರಿ ತಾಲೂಕಿನ ಸಂಜೀವರಾಯನಕೋಟೆ ಗ್ರಾಮದಲ್ಲಿ ಚಿರತೆ ದಾಳಿಗೆ 13 ಕುರಿಗಳು ಬಲಿಯಾಗಿವೆ. ರಾತ್ರಿ ಮಾರುತಿ ಎಂಬುವರಿಗೆ ಸೇರಿದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿದೆ. ಸದ್ಯ ಚಿರತೆ ಸೆರೆ ಹಿಡಿಯುವಂತೆ ಸಂಜೀವರಾಯನಕೋಟೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

